ಬೆಂಗಳೂರು, ನ 14(SM): ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಡಿಸಿಪಿ ಗಿರೀಶ್ ಅವರಂತಹ ಅಧಿಕಾರಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಬೇಕು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ವ್ಯಂಗ್ಯವಾಡಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜನಾರ್ದನ ರೆಡ್ಡಿ ಅವರಿಗೆ ಬುಧವಾರ 1ನೇ ಎಸಿಎಂಎಂ ನ್ಯಾಯಾಲಯ ಜಾಮೀನು ನೀಡಿದೆ. ಜಾಮೀನು ಪಡೆದು ರಾತ್ರಿ 8.10ರ ವೇಳೆಗೆ ಅವರು ಜೈಲಿನಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದರು. ಜೈಲಿನಿಂದ ಹೊರಬಂದ ಬಳಿಕ ಅನಂತ್ ಕುಮಾರ್ ನೆನಪಿಸಿಕೊಂಡ ಜನಾರ್ದನ ರೆಡ್ಡಿ 'ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಿ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿದರು.
ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ಕರ್ನಾಟಕದ ನಂಬರ್ 1 ಅಧಿಕಾರಿಗಳು. ಇಂತಹ ಅಧಿಕಾರಿಗಳ ಅವಶ್ಯಕತೆ ಕರ್ನಾಟಕ ರಾಜ್ಯಕ್ಕಿಲ್ಲ. ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ನಾನು ಮನವಿ ಮಾಡುತ್ತೇನೆ. ಅಲೋಕ್ ಕುಮಾರ್, ಗಿರೀಶ್ ಅವರಂತಹ ಅಧಿಕಾರಿಗಳನ್ನು ಜಮ್ಮ ಮತ್ತು ಕಾಶ್ಮೀರಕ್ಕೆ ಕಳುಹಿಸಿ. ರಾಜಕಾರಣಿಗಳ ಮಾತನ್ನು ತಪ್ಪದೇ ಕೇಳುವ ಇಂತಹ ಅಧಿಕಾರಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಿದರೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ದೇಶವೇ ಕೊಂಡಾಡುತ್ತದೆ ಎಂದರು.