ಪುತ್ತೂರು, ನ 14(SM): ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರು ಮಹಿಳೆಯರು ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಸಂದರ್ಭ ಅವರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವಠಾರದ ಬಳಿ ನಡೆದಿದೆ. ಗದಗದ ದೇವಮ್ಮ(19), ನಾಗಮ್ಮ ಯಾನೆ ರೂಪಾ(18) ಹಾಗೂ ಗೀತಾ(24) ಬಂಧಿತರು.
ಅಲೆಮಾರಿ ಜನಾಂಗಕ್ಕೆ ಸೇರಿದ 3 ಜನ ಹೆಂಗಸರು ಚಿಕ್ಕಮಕ್ಕಳೊಂದಿಗೆ ಕೈಯಲ್ಲಿ ಬ್ಯಾಗ್ ಗಳನ್ನು ಹಿಡಿದುಕೊಂಡು ಸಂಶಯಾಸ್ಪದವಾಗಿ ಸುತ್ತಾಡುತ್ತಿದ್ದರು. ಈ ಬಗ್ಗೆ ಉಪ್ಪಿನಂಗಡಿ ಠಾಣಾ ಪೊಲೀಸರಿಗೆ ಮಾಹಿತಿ ರವಾನೆಯಾಗಿದೆ. ಉಪ್ಪಿನಂಗಡಿ ಠಾಣಾ ಪಿಎಸ್ಐ ನಂದಕುಮಾರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಈ ಸಂದರ್ಭ ಪೊಲೀಸರನ್ನು ಕಂಡು, ಮೂವರು ಹೆಂಗಸರು ನದಿಯ ಕಡೆಗೆ ಓಡಿ ಹೋಗಲೆತ್ನಿಸಿದ್ದಾರೆ.ತಕ್ಷಣ ಅವರನ್ನು ತಡೆದ ಪೊಲೀಸರು ವಿಚಾರನೆ ನಡೆಸಿದ್ದಾರೆ. ಅಲ್ಲದೆ ಅವರ ಕೈಯಲ್ಲಿದ್ದ ಬ್ಯಾಗ್ ಗಳನ್ನು ಪರಿಶೀಲನೆ ನಡೆಸಿದ ಸಂದರ್ಭ ಅವುಗಳಲ್ಲಿ ಬಟ್ಟೆ ಬರೆಗಳ ಮಧ್ಯೆ ಚಿನ್ನಾಭರಣ, ಮೊಬೈಲ್ ಗಳು ಇರುವುದು ಪತ್ತೆಯಾಗಿದೆ. ತಕ್ಷಣ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಆರೋಪಿ ಮಹಿಳೆಯರ ಕೈಯಲ್ಲಿದ್ದ ಮೊಬೈಲ್, ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ವಿಚಾರಣೆಗೆ ಮಾಡಿದಾಗ ಮಂಗಳೂರಿನ ಬಜಾಲ್ ಎಂಬಲ್ಲಿನ ರಿಕ್ಷಾ ಚಾಲಕರೊಬ್ಬರಿಗೆ ಮೋಸ ಮಾಡಿ ಈ ವಸ್ತುಗಳನ್ನು ಕಬಳಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ