ಶಿವಮೊಗ್ಗ, ನ 15(MSP): ಎಲ್ಪಿಜಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೊಂದು ನ.15 ರ ಗುರುವಾರ ಮುಂಜಾನೆ ಪಲ್ಟಿಯಾಗಿ ಸಿಲಿಂಡರ್ ಗಳು ಸ್ಫೋಟಗೊಂಡು ಚಾಲಕ ಸಜೀವವಾಗಿ ದಹನಗೊಂಡಿರುವ ಘಟನೆ ಶಿವಮೊಗ್ಗದ ಮಂಡಿಗೆಹಳ್ಳದಲ್ಲಿ ನಡೆದಿದೆ. ಬೆಳಗಿನ ಜಾವ ನಾಲ್ಕೂವರೆ ಗಂಟೆ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದೆ. ಸ್ಫೋಟದಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
ಇಂಡಿಯನ್ ಗ್ಯಾಸ್ ಕಂಪೆನಿಯ ಸಿಲಿಂಡರ್ಗಳನ್ನು ತುಂಬಿಕೊಂಡಿದ್ದ ಲಾರಿಯೂ ಸಾಗರದಿಂದ ಕಾರ್ಗಲ್ ಕಡೆಗೆ ತೆರಳುತ್ತಿತ್ತು. ಈ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಬಿದ್ದ ರಭಸಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಗಳು ಸ್ಫೋಟಗೊಂಡಿದೆ. ಸ್ಫೋಟದಿಂದ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು ಪರಿಣಾಮ ಚಾಲಕ ಸಜೀವವಾಗಿ ದಹನಗೊಂಡಿದ್ದಾರೆ.
ಸ್ಥಳಕ್ಕೆಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು ಬೆಂಕಿಯನ್ನು ನಿಯಂತ್ರಿಸಿದ್ದಾರೆ. ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಲಾರಿ ಭಸ್ಮವಾಗಿದ್ದು, ಚಾಲಕ ಯಾರು, ಲಾರಿಯಲ್ಲಿ ಎಷ್ಟು ಜನ ಇದ್ದರು ಎನ್ನುವ ಮಾಹಿತಿ ಸಿಕ್ಕಿಲ್ಲ. ಲಾರಿಯ ನಂಬರ್ ಪ್ಲೇಟ್ ಸಹ ಹೊತ್ತಿ ಉರಿದ ಪರಿಣಾಮ ಮಾಲೀಕರು ಯಾರು ಎನ್ನುವುದು ತಿಳಿದು ಬಂದಿಲ್ಲ. ಚಾಲಕನ ಒಂದು ಶವ ಮಾತ್ರ ಪತ್ತೆಯಾಗಿದೆ.