ಕುಂದಾಪುರ, ನ 15(MSP): ಇಲ್ಲಿನ ಕೋಡಿ ಕಿನಾರೆಗೆ ಬಂದು ಬಿದ್ದ ಬೂತಾಯಿ ರಾಶಿ ಸ್ಥಳೀಯರಿಗೆ ಮೀನೂಟದ ಹಬ್ಬವನ್ನುಂಟು ಮಾಡಿತ್ತು. ಹೌದು ಕೋಡಿ ಕಡಲ ಕಿನಾರೆಯಲ್ಲಿ ನ.14 ರ ಬುಧವಾರ ಮೀನುಗಾರಿಕೆಗೆ ತೆರಳಿದ್ದ ಬೀಜಾಡಿಯ ಕರಾವಳಿ ಫ್ರೆಂಡ್ಸ್ ನ ಕೈರಂಪಣಿ ಬಲೆಯ ದೋಣಿಗೆ ರಾಶಿ ರಾಶಿಯಾಗಿ ಬೂತಾಯಿ ಮೀನುಗಳು ಸಿಕ್ಕಿದ್ದು ಕೊನೆಗೆ ಮೀನು ಎಳೆಯಲಾಗದೆ ಬಲೆಯೇ ಹರಿದು ಹೋಗಿದೆ. ಸುಮಾರು 3 ಸಾವಿರ ಕೆ.ಜಿಯಷ್ಟು ಮೀನುಗಳು ಬಲೆಗೆ ಬಿದ್ದಿವೆ. ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಮೀನುಗಳು ತಪ್ಪಿಸಿಕೊಂಡು ಹೋಗಿರುವುದು ವಿಶೇಷ..
ಬೆಳಗ್ಗೆ 6.30ಕ್ಕೆ ಸುಮಾರಿಗೆ ಕೈರಂಪಣಿ ದೋಣಿಗೆ ಅಪಾರ ಪ್ರಮಾಣದ ಮೀನು ಸಿಕ್ಕಿದೆ ಎನ್ನುವ ಸುದ್ದಿ ಪರಿಸರದಲ್ಲಿ ಹಬ್ಬಿದ್ದು, ಮೀನು ಖರೀದಿಗೆ ಸ್ಥಳೀಯರು ಮುಗಿಬಿದ್ದರು. ದೋಣಿಯವರಿಗೆ ಸಿಕ್ಕಿದ ಮೀನುಗಳನ್ನು ಕೋಟದ ಫಿಶ್ ಮೀಲ್ ಗೆ ನೀಡಲಾಗಿದೆ. ದಡಕ್ಕೆ ಬಂದು ಬಿದ್ದ ಮೀನುಗಳನ್ನು ಸ್ಥಳೀಯರು ಹಂಚಿಕೊಂಡರು.
ಬಲೆ ಸಾಮರ್ಥ್ಯಕ್ಕಿಂತ ಹೆಚ್ಚು ಮೀನು ಬಿದ್ದ ಕಾರಣ ಎಳೆಯುವಾಗ ತುಂಡಾಗಿ ಅರ್ಧದಷ್ಟು ಮೀನುಗಳು ಮತ್ತೆ ಸಮುದ್ರ ಸೇರಿವೆ. ಬಳಿಕ ದೋಣಿಯಲ್ಲಿದ್ದ 16ಮಂದಿಯೊಂದಿಗೆ ಸ್ಥಳೀಯ 50 ಮಂದಿ ಸೇರಿ ಬಲೆಯನ್ನು ದಡಕ್ಕೆ ಎಳೆದುತಂದರು. ತಲಾ 40 ಕೆ.ಜಿ ಯಂತೆ 54 ಬಾಕ್ಸ್ ಗಳಲ್ಲಿ ಮೀನುಗಳನ್ನು ತುಂಬಿ ಮಾರಾಟ ಮಾಡಲಾಗಿದೆ. ಒಟ್ಟಾರೆಯಾಗಿ 1.25 ಲಕ್ಷ ಮೌಲ್ಯದ ಮೀನು ಸಿಕ್ಕಿರಬಹುದೆಂದು ಅಂದಾಜಿಸಲಾಗಿದೆ.
ಮೀನುಗಾರರ ಪ್ರಕಾರ ಇದೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ಬೂತಾಯಿ ಮೀನುಗಳು ದಡಕ್ಕೆ ಬಂದಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿರುವ ದೋಣಿಗಾರಿಕೆ ನಡೆಸುತ್ತಿರುವ ದೋಣಿಗಳ ಎಂಜಿನ್ ಶಬ್ದಕ್ಕೆ ಹೆದರಿ ಮೀನುಗಳು ಗಂಪಾಗಿ ಹೋಗುತ್ತಿದ್ದು, ಅದೇ ವೇಳೆ ಅಲೆಗಳ ಅಬ್ಬರದಿಂದ ದಡದತ್ತ ತೇಲಿಬಂದಿರಬಹುದು ಎನ್ನುತ್ತಾರೆ ಮೀನುಗಾರರು.