ಉಳ್ಳಾಲ, ನ 15(SM): ದೇರಳಕಟ್ಟೆ ಕಾನೆಕೆರೆಯ ಬಳಿ ಮೂರು ಬಾವಿಗಳಲ್ಲಿ ತೈಲಾಂಶ ಪತ್ತೆಯಗಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬಾವಿಗಳ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಬಾವಿಯ ನೀರು ಖಾಲಿಯಾಗುತ್ತಿದ್ದಂತೆ ಬಾವಿಯೊಳಗಡೆ ಪೆಟ್ರೋಲ್ ಪತ್ತೆಯಾಗುತ್ತಿದ್ದು, ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿದೆ.
ಬಾವಿ ನೀರಿನಲ್ಲಿ ಪೆಟ್ರೋಲ್ ಅಂಶ ಪತ್ತೆಯಾದ ಹಿನ್ನೆಲೆ ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭ ಸ್ಥಳೀಯ ನಿವಾಸಿಗಳು ಬಾವಿ ನೀರಿನಲ್ಲಿ ಪೆಟ್ರೋಲ್ ಇರುವ ಬಗ್ಗೆ ಬಾವಿಯಿಂದ ಹೊರ ತೆಗೆದ ನೀರಿಗೆ ಬೆಂಕಿಯನ್ನು ಹಚ್ಚಿ ತೋರಿಸಿದ್ದರು.
ಈ ಹಿನ್ನೆಲೆ ಬಾವಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಬಾವಿಯನ್ನು ಶುಚಿಗೊಳಿಸಲು ಉಸ್ತುವಾರಿ ಸಚಿವರು ಬೆಳ್ಮ ಗ್ರಾಮ ಪಂಚಾಯತ್ ಗೆ ಆದೇಶ ನೀಡಿದ್ದರು. ಉಸ್ತುವಾರಿ ಸಚಿವರ ಆದೇಶದಂತೆ ಗ್ರಾಮ ಪಂಚಾಯತ್ ನೀರು ಖಾಲಿ ಮಾಡಲು ಮುಂದಾಗಿದೆ. ನೀರು ಖಾಲಿ ಮಾಡುತ್ತಿದ್ದಂತೆ ಬಾವಿಯಲ್ಲಿ ಪೆಟ್ರೋಲ್ ಪತ್ತೆಯಾಗಿದ್ದು, ಇದು ಸ್ಥಳೀಯ ನಿವಾಸಿಗಳನ್ನು ಗೊಂದಲಕ್ಕೀಡು ಮಾಡಿದೆ.
ಇನ್ನೊಂದೆಡೆ ದೆರಳಕಟ್ಟೆಯ ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ಸೋರಿಕೆಯಾಗಿದೆ ಎನ್ನಲಾಗಿತ್ತು. ಆದರೆ, ಅಧಿಕಾರಿಗಳು ಬಂದು ಪರಿಶೀಲಿಸಿದ ಬಳಿಕ ಪೆಟ್ರೋಲ್ ಸೋರಿಕೆಯಾಗಿಲ್ಲ ಎಂದು ದೃಢಪಡಿಸಿದ್ದರು.
ಸದ್ಯ ಬಾವಿಯಲ್ಲಿ ಸಿಕ್ಕಿದ ಪೆಟ್ರೋಲನ್ನು ಸ್ಥಳಿಯರು ಬಾಟಲಿಗಳಲ್ಲಿ ಸಂಗ್ರಹಿಸಿದ್ದಾರೆ. ಇನ್ನು ಈ ಹಿಂದೆ ಸಚಿವರು ನೀಡಿದ ಆದೇಶದಂತೆ ಪೆಟ್ರೋಲ್ ಅಂಶಯುಕ್ತ ನೀರನ್ನು ಪರೀಕ್ಷಿಸಲು ಎಂಆರ್ ಪಿಎಲ್ ಗೆ ಕಳುಹಿಸಿಕೊಡಲಾಗಿದೆ.