ಬೀದರ್, ನ 15(SM): ದ್ವೇಷದ ರಾಜಕಾರಣ ಮಾಡುವವನಿದ್ದರೆ ಇಷ್ಟು ವರ್ಷ ಕಾಯುತ್ತಿರಲಿಲ್ಲ. ಈ ಮುಂಚೆಯೇ ಮಾಡಿರುತ್ತಿದ್ದೆ ಎಂದು ಸಿಎಂ ಕುಮಾರಸ್ವಾಮಿ ಅವರು ಜನಾರ್ದನ ರೆಡ್ಡಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬೀದರ್ನಲ್ಲಿ ಕೃಷಿ ಸಪ್ತಾಹ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ್ವೇಷದ ರಾಜಕಾರಣ ಮಾಡುವ ಮನಸ್ಸು ನನಗಿಲ್ಲ. ಹಾಗಿದ್ದರೆ ಇದ್ದಿದ್ದರೆ 12 ವರ್ಷಗಳ ಹಿಂದೆ ಮುಖ್ಯಮಂತ್ರಿ ಆಗಿದ್ದಾಗಲೇ ಆ ಕೆಲಸ ಮಾಡಿರುತ್ತಿದ್ದೆ ಎಂದು ಅವರು ಹೇಳಿದ್ದಾರೆ.
ಜನಾರ್ದನ ರೆಡ್ಡಿ ತಾನು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡು ಹಣ ವಾಪಸ್ ನೀಡುತ್ತೇನೆ ಎಂದು ಹೇಳುತ್ತಿದ್ದಾನೆ. ಅವನಿಗೆ ರಕ್ಷಣೆ ಕೊಡ್ತೀನಿ ಎಂದು ಹೇಳುವುದು ಎಷ್ಟು ಸರಿ ಎಂದು ಅವರು ಮಾಧ್ಯಮಗಳನ್ನು ಪ್ರಶ್ನಿಸಿದರು. ಆಂಬಿಡೆಂಟ್ ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡಬೇಕೆಂದು ರೆಡ್ಡಿ ಅವರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದಾರೆ. ಇದರಲ್ಲೇ ಅವರ ಸತ್ಯಾಸತ್ಯತೆ ಗೊತ್ತಾಗುತ್ತದೆ. ತನಿಖೆ ಆದರೆ ಸತ್ಯ ಬಯಲಾಗುತ್ತದೆ ಎಂಬ ಅಳುಕು ಅವರಿಗಿದೆ ಎಂದು ಅವರು ಹೇಳಿದರು.