ಪುತ್ತೂರು, ನ 16 (MSP): ಮದುವೆಗೆ ತಂದೆ ಅನಿವಾರ್ಯವೆಂದು , ಅಪ್ರಾಪ್ತೆ ಬಾಲಕಿಯ ತಂದೆಯನ್ನೇ ಅಪಹರಿಸಿ ಬಲವಂತವಾಗಿ ಮೌಲ್ವಿಯೋರ್ವರ ಮನೆಯಲ್ಲಿ ಸೀಮಿತ ಬಂಧುಗಳ ಸಮ್ಮುಖ ಮದುವೆ ಕಾರ್ಯ ನೆರವೇರಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಬಾಲ್ಯ ವಿವಾಹ ನಡೆಯುತ್ತಿದೆ ಹಾಗೂ ಮಾಣಿ ಸಮೀಪದ ನೇರಳಕಟ್ಟೆ ಸಭಾಂಗಣವೊಂದರಲ್ಲಿ ಅಪ್ರಾಪ್ತೆಗೆ ಮದುವೆ ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ಯಾವುದೇ ಸುಳಿವು ಸಿಗದೆ ಬರಿಗೈಯಲ್ಲಿ ಬಂದ ಘಟನೆ ಬುಧವಾರ ನಡೆದಿತ್ತು. ನೇರಳಕಟ್ಟೆ ಮದುವೆ ಸಭಾಂಗಣದಲ್ಲಿ ಮದುವೆ ನಡೆಯುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ್ಕೆ ಕರೆ ಬಂದಿದ್ದು, ಆಮಂತ್ರಣದ ಪ್ರತಿಯನ್ನು ರವಾನಿಸಲಾಗಿತ್ತು. ಆದರೆ ನ.೧೪ ರಂದು ಅಧಿಕಾರಿಗಳು ಆಗಮಿಸುವ ವೇಳೆ ಅಲ್ಲಿ ಬೇರೆಯೇ ಮದುವೆ ನಡೆಯುತ್ತಿತ್ತೇ ವಿನಾಃ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಲಭಿಸಿದ ಆಮಂತ್ರಣ ಪತ್ರಿಕೆಯಲ್ಲಿದ್ದ ಹೆಸರಿನ ಜೋಡಿಗಳಿಗೆ ಮದುವೆ ನಡೆಯುತ್ತಿರಲಿಲ್ಲ.
ಆದರೆ ಸವಣೂರು ಗ್ರಾಮದಲ್ಲಿ ವಾಸವಾಗಿದ್ದ ತನ್ನ 17 ರ ಹರೆಯ ಮಗಳಿಗೆ ವಿವಾಹ ಮಾಡಲೆಂದು ತನ್ನನ್ನೇ ಅಪಹರಿಸಿ ಉಪ್ಪಿನಂಗಡಿ ಹುಡುಗನೊಂದಿಗೆ ಬುಧವಾರ ಮಾಣಿ ಬಳಿಯಿರುವ ಮೌಲ್ವಿಯೋರ್ವರ ಮನೆಯಲ್ಲಿ ಸೀಮಿತ ಬಂಧುಗಳ ಸಮ್ಮುಖದಲ್ಲಿ ಮದುವೆ ಮಾಡಿದ್ದಾರೆ ಎಂದು ಸ್ವತಃ ಹುಡುಗಿಯ ತಂದೆ, ಮಂಗಳೂರಿನ ಪಾಂಡೇಶ್ವರ ನಿವಾಸಿ ಮುನೀರ್ ಅಹಮ್ಮದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮುನೀರ್ ಅವರ ಮೊದಲ ಪತ್ನಿಯ 17 ವರ್ಷದ ಮಗಳಿಗೆ ಇತ್ತೀಚೆಗೆ ಮೊದಲ ಪತ್ನಿಯ ಕುಟುಂಬಸ್ಥರು ವಿವಾಹ ನಿಶ್ಚಯಿಸಿದ್ದರು. ಆದರೆ ಮಗಳಿಗೆ 18 ವರ್ಷ ತುಂಬದ ಕಾರಣ ತಂದೆ ಮುನೀರ್ ವಿರೋಧ ವ್ಯಕ್ತಪಡಿಸಿದ್ದರು. ನ.14 ರಂದು ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಮುನೀರ್ ಅವರನ್ನು ಅಪಹರಿಸಿ ಮಾಣಿ ಬಳಿಯ ಮೌಲ್ವಿ ಅವರ ಮನೆಗೆ ಕರೆದೊಯ್ದು ಅಪ್ರಾಪ್ತೆಯ ನಿಖಾ ಕಾರ್ಯ ನೆರವೇರಿಸಲಾಗಿತ್ತು. ನಿಖಾ ಸಂದರ್ಭ ತಾನು ವಿರೋಧ ವ್ಯಕ್ತಪಡಿಸಿದರೂ ಅಪಹರಣಕಾರರು, ಹಲ್ಲೆಗೆ ಮುಂದಾಗಿದ್ದರಿಂದ ಪ್ರಯೋಜನವಾಗಿಲ್ಲ ಎಂದುಗೋಳು ತೋಡಿಕೊಂಡಿದ್ದಾರೆ. ಇನ್ನು ವಿವಾಹವಾದ ಯುವಜೋಡಿಯನ್ನು ಮುನೀರ್ ಸಂಪರ್ಕಕ್ಕೆ ಯತ್ನಿಸಿದರೂ ಸಿಗದಿದ್ದರಿಂದ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರಿಗೆ ದೂರು ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿ ಶುಕ್ರವಾರದಂದು ಅಧಿಕಾರಿಗಳು ಮುನೀರ್ ಅವರಿಂದ ಹೆಚ್ಚಿನ ವಿಚಾರ ಕಲೆ ಹಾಕಲಿದ್ದಾರೆ ಎಂದು ಸಚಿವರ ಕಚೇರಿಯಿಂದ ಇ ಮೇಲ್ ಸಂದೇಶ ರವಾನೆಯಾಗಿದೆ.