ಕುಂದಾಪುರ, ನ 16 (MSP):ರಾಜ್ಯದ ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಸರ್ಕಾರದ ಎಲ್ಲಾ ವ್ಯವಸ್ಥೆಗಳನ್ನು ಬಳಸಿಕೊಂಡು ಚುನಾವಣೆ ಎದುರಿಸಿದರೂ ಕೂಡಾ ಅವರ ಷಡ್ಯಂತ್ರ ಶಿವಮೊಗ್ಗ ಕ್ಷೇತ್ರದಲ್ಲಿ ಫಲಿಸಲಿಲ್ಲ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಬಿಜೆಪಿಯ ದಕ್ಷಿಣ ಭಾರತದ ಬಾಗಿಲನ್ನು ಶಿವಮೊಗ್ಗದಿಂದಲೇ ಮುಚ್ಚುತ್ತೇನೆ ಎಂದಿದ್ದರು. ಅದು ಅವರಿಂದ ಸಾಧ್ಯವಾಗಿಲ್ಲ. ಪ್ರಜ್ಞಾವಂತ ಮತದಾರರು, ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಗೆಲುವು ಸಾಧಿಸಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ತಲ್ಲೂರಿನ ಶೇಷಕೃಷ್ಣ ಕನ್ವಷನ್ ಹಾಲ್ನಲ್ಲಿ ನಡೆದ ಬೈಂದೂರು ಬಿಜೆಪಿ ಮತದಾರರಿಗೆ ಕೃತಜ್ಞತೆ, ಅಭಿನಂದನಾ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಉಪ ಚುನಾವಣೆಯಾದ್ದರಿಂದ ಮತ ಚಲಾವಣೆ ಕಡಿಮೆಯಾಗಿದೆ. ಹಾಗಾಗಿ ಅಂತರ ಕಡಿಮೆಯಾಯಿತು. ಈಗ ನಡೆದಿರುವುದು ಪ್ರಿಪೆಟರಿ ಎಕ್ಸಾಂ. ಆದರೆ ಮೇ ತಿಂಗಳಲ್ಲಿ ಬರುವ ಮಹಾ ಚುನಾವಣೆ ನಮ್ಮ ಲಕ್ಷ್ಯವಾಗಬೇಕು. ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುವುದು ಪ್ರತಿಯೊಬ್ಬ ಬಿಜೆಪಿಗರ ಗುರಿಯಾಗಬೇಕು ಎಂದರು.
ಕ್ಷೇತ್ರದ ಅಭಿವೃದ್ದಿಗೆ ನಾನು ಬದ್ಧನಾಗಿದ್ದು, ಬೈಂದೂರಿನಲ್ಲಿ 15 ದಿನಗಳೊಳಗೆ ಬೈಂದೂರು ಪ್ರವಾಸಿ ಮಂದಿರದ ಹತ್ತಿರ ಸಂಸದರ ಕಛೇರಿ ಆರಂಭವಾಗಲಿದೆ. ಸಾರ್ವಜನಿಕರು ಅಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ವಾರದಲ್ಲಿ ಎಲ್ಲಾ ಕೆಡಿಪಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅಭಿವೃದ್ದಿಯ ವೇಗವನ್ನು ಇನ್ನಷ್ಟು ಚುರುಕು ಮುಟ್ಟಿಸಲಾಗುವುದು ಎಂದರು.
ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಈ ಚುನಾವಣೆಯಲ್ಲಿ ನಿರೀಕ್ಷಿತ ಮತ ಬರಲಿಲ್ಲ. ಅದಕ್ಕೆ ಕಾರಣ ಮತ ಚಲಾವಣೆ ಕಡಿಮೆಯಾಗಿರುವುದು. ವಿಧಾನಸಭಾ ಚುನಾವಣೆಯಲ್ಲಿ ಶೇ.80ರಷ್ಟು ಮತದಾನವಾಗಿತ್ತು. ಈ ಉಪ ಚುನಾವಣೆಯಲ್ಲಿ ೫೯% ಮತದಾನವಾಗಿದೆ. ಕಡಿಮೆ ಮತದಾನ ಆದರೂ ಕೂಡಾ ಮತದಾರರು ಗೌರವಯುತ ಮತ ಹಾಕಿದ್ದಾರೆ. ಕಾರ್ಯಕರ್ತರು ಮುಂದಿನ ಚುನಾವಣೆಗೆ ಈಗಲೇ ಕಾರ್ಯತಂತ್ರ ರೂಪಿಸಬೇಕು. ಅನುಭವಿ ಸಂಸದರು ಕ್ಷೇತ್ರಕ್ಕೆ ಸಿಕ್ಕಿದ್ದಾರೆ. ಕ್ಷೇತ್ರದ ಅಭಿವೃದ್ದಿಗೆ ಅವರ ಮಾರ್ಗದರ್ಶನ ಸಿಗುವುದರಿಂದ ಇನ್ನಷ್ಟು ವೇಗವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಅಭಿನಂದಿಸಲಾಯಿತು. ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಚುನಾವಣಾ ಉಸ್ತುವಾರಿ ಉದಯಕುಮಾರ ಶೆಟ್ಟಿ ಸಂಸದರನ್ನು ಅಭಿನಂದಿಸಿ ಮಾತನಾಡಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ ಶೆಟ್ಟಿ, ಸಂಧ್ಯಾ ರಮೇಶ, ಕಾರ್ಯಕಾರಿಣಿ ಸದಸ್ಯ ಕಿರಣ್ ಕುಮಾರ್ ಕೊಡ್ಗಿ, ಜಿ.ಪಂ.ಸದಸ್ಯರಾದ ಬಾಬು ಶೆಟ್ಟಿ, ಸುರೇಶ ಬಟ್ವಾಡಿ, ಶೋಭಾ ಪುತ್ರನ್, ಶಂಕರ್ ಪೂಜಾರಿ, ರೋಹಿತ್ ಕುಮಾರ್ ಶೆಟ್ಟಿ, ಬೈಂದೂರು ಕ್ಷೇತ್ರದ ಮಹಿಳಾ ಮೋರ್ಛಾದ ಅಧ್ಯಕ್ಷೆ ಪ್ರಿಯದರ್ಶಿನಿ, ಹಿಂದುಳಿದ ಮೋರ್ಛಾದ ಅಧ್ಯಕ್ಷ ಗಣೇಶ ಪೂಜಾರಿ, ಗೋಪಾಲಕೃಷ್ಣ ನಾಡ, ರಾಜ್ಯ ಪರಿಷತ್ ಸದಸ್ಯ ರಾಘವೇಂದ್ರ ನೆಂಪು ಉಪಸ್ಥಿತರಿದ್ದರು.