ಮೂಡುಬಿದಿರೆ, ನ17(SS): ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧದ ಹಿಂದೆ ಬಹುದೊಡ್ಡ ರಾಜಕಾರಣವಿದೆ ಎಂದು ಆಳ್ವಾಸ್ ನುಡಿಸಿ 2018ರ ಸಮ್ಮೇಳನಾಧ್ಯಕ್ಷೆ ಡಾ. ಮಲ್ಲಿಕಾ ಎಸ್ ಘಂಟಿ ಹೇಳಿದ್ದಾರೆ.
ಆಳ್ವಾಸ್ ನುಡಿಸಿರಿ 2018ರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳೆಯರು ಅಯ್ಯಪ್ಪಗುಡಿ ಪ್ರವೇಶಿಸುವುದನ್ನು ಜನ ಸಮುದಾಯದ ನಂಬಿಕೆ, ಭಾವನೆಗಳು ಪ್ರಬಲವಾಗಿ ವಿರೋಧಿಸುತ್ತಿವೆ ಎಂಬುದಾಗಿ ಬಿಂಬಿಸಲಾಗುತ್ತಿದೆ. ಇದರ ಹಿಂದೆ ಬಹುದೊಡ್ಡ ರಾಜಕಾರಣವಿದೆ. ಯಾವುದೋ ಕಾಲದಲ್ಲಿ ಹುಟ್ಟಿಕೊಂಡ ನಂಬಿಕೆ, ಆಚಾರಗಳು ಎಲ್ಲ ಕಾಲಕ್ಕೂ ನಿಯಂತ್ರಕಗಳಾಗಿ ನಿಲ್ಲುವುದರ ಹಿಂದೆ ಬಹುದೊಡ್ಡ ಧಾರ್ಮಿಕ ರಾಜಕಾರಣ ಇದ್ದೇ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ದೇವರುಗಳು, ಧರ್ಮಗಳು ಮುಖವಾಡ ಹಾಕಿಕೊಂಡು ಕತ್ತಿ ಮಸೆಯುತ್ತಿದೆ. ಇದು ಸರಿಯಲ್ಲ. ದೇವಾಲಯ, ಚರ್ಚ್, ಮಸೀದಿಗಳಲ್ಲಿ ಜಾತಿ - ಲಿಂಗ ಕಾರಣಗಳಿಂದ ಪ್ರವೇಶ ನಿರಾಕರಿಸುವುದು ಪ್ರಜಾಪ್ರಭುತ್ವವನ್ನು ಗೌರವಿಸಿದಂತೆ ಆಗುವುದಿಲ್ಲ ಎಂದು ತಿಳಿಸಿದರು.
ಶ್ರೀ ಸ್ವಾಮಿ ಅಯ್ಯಪ್ಪನ ದೇಗುಲ ಪ್ರವೇಶದ ವಿಚಾರ ಪರಿಹಾರ ತಾಳ್ಮೆ, ಸಹನೆಯಿಂದ ಆಗಬಹುದಾದ ಕಾರ್ಯ. ಕತ್ತಿ, ಗುರಾಣಿಗಳಿಗಿಂತಲೂ ಪ್ರೀತಿ, ನಂಬಿಕೆ, ವಿಶ್ವಾಸಗಳ ಮೂಲಕ ಈ ಯುದ್ಧ ಗೆಲ್ಲುವ ಇರಾದೆ ಮನುಷ್ಯ ಘನತೆಯದ್ದಾಗಬೇಕು. ಆದರೆ ಇಲ್ಲಿ ಮತ ರಾಜಕಾರಣದ ಲೆಕ್ಕಾಚಾರ ನಡೆಯುತ್ತಿದೆ.