ಪುಣೆ, ನ17(SS): ಈ ಬಾರಿ ನಾವು ಶಬರಿಮಲೆಗೆ ಹೋಗುವುದಕ್ಕೂ ಮೊದಲು ಘೋಷಣೆ ಮಾಡಿಕೊಂಡಿದ್ದೆವು. ಆದರೆ, ಮುಂದಿನ ಬಾರಿ ಹೋಗುವಾಗ ಸದ್ದಿಲ್ಲದೆ ಹೋಗುತ್ತೇವೆ ಎಂದು ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆಮಾತನಾಡಿದ ಅವರು, ಮುಂದಿನ ಬಾರಿ ಯಾವುದೇ ರೀತಿಯ ಮುನ್ಸೂಚನೆ ನೀಡದೇ ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುತ್ತೇವೆ. ಈ ಬಾರಿ ನಾವು ಶಬರಿಮಲೆಗೆ ಹೋಗುವುದಕ್ಕೂ ಮೊದಲು ಘೋಷಣೆ ಮಾಡಿಕೊಂಡಿದ್ದೆವು. ಆದರೆ, ಮುಂದಿನ ಬಾರಿ ಹೋಗುವಾಗ ಸದ್ದಿಲ್ಲದೆ ಹೋಗುತ್ತೇವೆ. ಗೆರಿಲ್ಲಾ ತಂತ್ರ ಅನುಸರಿಸುತ್ತೇವೆ. ಇದಕ್ಕೆ ಪೊಲೀಸರೂ ನಮಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ನಾನು ಶಬರಿಮಲೆಗೆ ಹೋಗಲು ಸಿದ್ಧತೆ ನಡೆಸಿದಾಗ ನಮ್ಮ ವಿರುದ್ಧ ಪ್ರತಿಭಟನಾಕಾರರು ಸಂಘರ್ಷಕ್ಕಿಳಿದಿದ್ದರು. ಗೂಂಡಾಗಳಂತೆ ವರ್ತಿಸುತ್ತಿದ್ದರು. ಅವರು ತಮ್ಮನ್ನು ಅಯ್ಯಪ್ಪನ ಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅಸಹ್ಯ ನಿಂದನೆ, ಬೆದರಿಕೆ ಹಾಕುವ ಅವರು ಅಯ್ಯಪ್ಪನ ಭಕ್ತರು ಎನಿಸಲಿಲ್ಲ ಬೇಸರ ವ್ಯಕ್ತಪಡಸಿದರು.
ಮುಂದಿನ ವರ್ಷ ಕೇರಳ ಪೊಲೀಸರು ನಮಗೆ ಸಂಪೂರ್ಣ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ಬಾರಿ ಬಂದಾಗ ಭದ್ರತೆ ಒದಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ನಮ್ಮಿಂದ ಅಲ್ಲಿ ಅಶಾಂತಿ ಉಂಟಾಗದಿರಲೆಂದು ನಾವು ಹಿಂದಿರುಗಿದ್ದೇವೆ ಎಂದು ಹೇಳಿದ್ದಾರೆ.
ನಾವು ದೇವರ ದರ್ಶನಕ್ಕೆ ಆಗಮಿಸುತ್ತಿರುವುದಾಗಿ ಘೋಷಣೆ ಮಾಡಿ ಕೇರಳಕ್ಕೆ ಹೊರಟಿದ್ದರಿಂದಲೇ ನಮ್ಮ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಮುಂದಿನ ಬಾರಿ ನಾವು ಘೋಷಣೆಯನ್ನೇ ಮಾಡುವುದಿಲ್ಲ. ಗೆರಿಲ್ಲಾ ತಂತ್ರ ಬಳಸಿಕೊಂಡು ದರ್ಶನಕ್ಕೆ ಹೋಗುತ್ತೇವೆ ಎಂದವರು ಹೇಳಿದ್ದಾರೆ.
ಅಯ್ಯಪ್ಪ ದರ್ಶನಕ್ಕಾಗಿ ಕೇರಳಕ್ಕೆ ತೆರಳಿದ್ದ ತೃಪ್ತಿ ದೇಸಾಯಿ, ಅಯ್ಯಪ್ಪ ಭಕ್ತರ ಪ್ರತಿಭಟನೆಯಿಂದಾಗಿ ದರ್ಶನ ಮಾಡದೇ ಕೊಚ್ಚಿ ವಿಮಾನ ನಿಲ್ದಾಣದಿಂದ ಪುಣೆಗೆ ವಾಪಸ್ ಆಗಿದ್ದಾರೆ.