ಉಡುಪಿ, ನ17(SS): ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿಚಾರದ ಕುರಿತು ಹೋರಾಟಗಾರ್ತಿ ತೃಪ್ತಿ ದೇಸಾಯಿ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಬರಿಮಲೆ ತೆರಳಲು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೃಪ್ತಿ ದೇಸಾಯಿ ಬಂದಿಳಿದಿದ್ದರು. ಆದರೆ ಅವರು ಬಂದ ಸ್ಟೈಲ್ ಅಯ್ಯಪ್ಪ ಭಕ್ತೆಯಂತೆ ಕಾಣುತ್ತಿರಲಿಲ್ಲ. ತೃಪ್ತಿ ಓರ್ವ ಸ್ತ್ರೀವಾದಿಯ ಸೋಗಿನಲ್ಲಿ ಬಂದಿದ್ದಾರೆ ಎಂದು ಕಿಡಿ ಕಾರಿದರು.
ತೃಪ್ತಿ ದೇಸಾಯಿ ಆಗಮಿಸಿದ್ದು ದೇಶದಲ್ಲಿ ಪ್ರಚಾರ ಗಿಟ್ಟಿಸಲು. ಅಯ್ಯಪ್ಪನ ಭಕ್ತರಾಗಿ ತೃಪ್ತಿ ದೇಸಾಯಿ ಕೇರಳಕ್ಕೆ ಬಂದಿಲ್ಲ. ಅವರು ಬಂದಿದ್ದ ಸ್ಟೈಲ್ ದೇಗುಲಕ್ಕೆ ಬಂದವರ ಹಾಗೆ ಕಾಣುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ತೃಪ್ತಿದೇಸಾಯಿ ಇರುಮುಡಿ ಇಲ್ಲದೇ ದೇಗುಲ ಪ್ರವೇಶಿಸಲು ಸಾಧ್ಯವಿಲ್ಲ. ಮಾತ್ರವಲ್ಲ ಅವರು ಉಪವಾಸ ವೃತ ಮಾಡಿಲ್ಲ. ಇರುಮುಡಿ ಇಲ್ಲದೆ, 41 ದಿನ ಉಪವಾಸ ಮಾಡದೇ ಬರಬಹುದು ಎಂದು ಕೋರ್ಟ್ ಹೇಳಿಲ್ಲ. ಹಿಂದೂ ಧರ್ಮ ಅವಹೇಳನ ಮಾಡುವವರು ದೇಶದಲ್ಲಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಇಷ್ಟು ವರ್ಷ ಎಲ್ಲವನ್ನು ಸಹಿಸಿಕೊಂಡು ಬಂದಿದ್ದೇವೆ. ಇನ್ನು ಸಹಿಸಲು ಸಾಧ್ಯವಿಲ್ಲ. ಅಯ್ಯಪ್ಪ ದೇವಸ್ಥಾನದ ವಿಚಾರ ಭಕ್ತರಿಗೆ, ಪಂದಳ ರಾಜ, ಅರ್ಚಕರಿಗೆ ಬಿಡಬೇಕು. ಸುಪ್ರೀಂಕೋರ್ಟ್ ಅಯ್ಯಪ್ಪ ಭಕ್ತರ ಭಾವನೆಗೆ ಬೆಲೆ ಕೊಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.