ಚೆನ್ನೈ, ನ17(SS): ಗಜ ಚಂಡಮಾರುತ ತಮಿಳುನಾಡಿನಲ್ಲಿ ರೌದ್ರಾವತಾರ ತಾಳಿದ್ದು, 23 ಮಂದಿಯನ್ನು ಬಲಿ ಪಡೆದುಕೊಂಡಿದೆ. ತಮಿಳುನಾಡು ಮತ್ತು ಪುದುಚೆರಿ ಕರಾವಳಿ ತೀರಕ್ಕೆ ಚಂಡಮಾರುತ ಅಪ್ಪಳಿಸಿದ್ದು ಭಾರಿ ಮಳೆ ಸುರಿಯುತ್ತಿದೆ.
ತಮಿಳುನಾಡು ಭಾಗಗಳಲ್ಲಿ ಪ್ರಬಲವಾಗಿರುವ ಗಜ ಚಂಡಮಾರುತ ತೀವ್ರತೆಯಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲಿ ಮೋಡ ಕವಿದ ವಾತಾವರಣವಿದೆ. ಮಾತ್ರವಲ್ಲ ಅಲ್ಲಲ್ಲಿ ತುಂತುರು ಮಳೆಯಾಗಿದೆ ಎಂದು ಮೂಲಗಳು ತಿಳಿಸಿದೆ.
ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುವ ಗಜ ಚಂಡಮಾರುತವು ನಾಗಪಟ್ಟಣಂ ಮತ್ತು ವೇದಾರಣ್ಯಂ ಮಧ್ಯದ ಕರಾವಳಿ ತೀರಕ್ಕೆ ಅಪ್ಪಳಿಸಿದೆ. ನಾಗಪಟ್ಟಣಂ, ಕಡಲೂರು, ಪುದುಕೊಟ್ಟೈ, ಕರೈಕಲ್, ರಾಮನಾಥಪುರಂ, ತಿರುವಾರೂರು ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ನಾಗಪಟ್ಟಣಂ, ಕಡಲೂರು, ತಾಂಜಾವೂರು ಸೇರಿದಂತೆ ಅನೇಕ ಪಟ್ಟಣಗಳಲ್ಲಿ ಸಾವಿರಾರು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಆರು ಜಿಲ್ಲೆಗಳ ಅರ್ಧಕರ್ಧ ಪಟ್ಟಣಗಳು ಕತ್ತಲಲ್ಲಿ ಮುಳುಗಿವೆ.
ತಮಿಳುನಾಡಿನಲ್ಲಿ ತಗ್ಗು ಹಾಗೂ ಕರಾವಳಿ ಪ್ರದೇಶದಲ್ಲಿರುವ 80 ಸಾವಿರಕ್ಕೂ ಹಚ್ಚು ಮಂದಿಯನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಗಿದೆ. 471 ಕ್ಕೂ ಮಿಕ್ಕಿ ಜನರು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.