ಉಡುಪಿ, ನ 17(SM): ಕೇಂದ್ರದಲ್ಲಿ ಆಡಳಿತದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಕಳೆದ ನಾಲ್ಕುವರೆ ವರ್ಷದಲ್ಲಿ ರಾಮಮಂದಿರ ಜ್ಞಾಪಕಕ್ಕೆ ಬಂದಿಲ್ಲ. ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಮಮಂದಿರದ ನೆನಪಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸಲ್ಮಾನರ ವಿರೋಧವಿಲ್ಲ. ನಮಗೆ ಮಂದಿರವೂ ಬೇಕು, ಮಸೀದಿಯೂ ಬೇಕು. ನಮ್ಮ ದೇಶದಲ್ಲಿರುವಂತೆ ಸರ್ವಧರ್ಮಿಯರು ಸಹೋದರರಂತೆ ಬಾಳುವುದನ್ನು ಇನ್ನೊಂದು ದೇಶದಲ್ಲಿ ಕಂಡಿಲ್ಲ ಎಂದರು.
ಇನ್ನು ಜನಾರ್ದನಾ ರೆಡ್ಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ರೆಡ್ಡಿ ಆರೋಪಗಳಿಂದ ದೂರ ಇದ್ದಂತಹ ಸಂದರ್ಭದಲ್ಲಿ ಬಿಜೆಪಿಯವರು ಜೊತೆಗಿರುತ್ತಾರೆ. ಆದರೆ, ಸಂಕಷ್ಟದ ಸಮಯದಲ್ಲಿ ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ವರ್ತಿಸುವುದು ಬಿಜೆಪಿಯ ಜಾಯಮಾನ ಎಂದು ವ್ಯಂಗ್ಯವಾಡಿದರು.