ಮಂಗಳೂರು,ನ 18 (MSP): ನಿರೀಕ್ಷೆಯಂತೆಯೇ 'ಗಜ ' ಚಂಡಮಾರುತ ತಮಿಳುನಾಡಿನಲ್ಲಿ ಆರ್ಭಟ ತೋರಿಸಿದ್ದು, ಸಾಕಷ್ಟು ಹಾನಿ ಮಾಡಿದೆ. ಆದರೆ 'ಗಜ ' ಚಂಡಮಾರುತ ಇದೀಗ ಬಂಗಾಳಕೊಲ್ಲಿಯಿಂದ ಅರಬ್ಬಿಸಮುದ್ರ ಕಡೆ ಸಾಗುತ್ತಿರುವ ಹಿನ್ನಲೆಯಲ್ಲಿ ಸಮುದ್ರ ಪ್ರಕ್ಷುಬ್ದಗೊಳ್ಳುವ ಮುನ್ಸೂಚನೆ ಸಿಕ್ಕಿದ್ದು, ಈ ಹಿನ್ನಲೆಯಲ್ಲಿ ನ.21 ರವರೆಗೆ ಮೀನುಗಾರರು ಕಡಲಿಗಿಳಿಯಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೇರಳ , ಲಕ್ಷದೀಪ ಸಹಿತ ಕರ್ನಾಟಕದ ಮೀನುಗಾರರು ನ.17 ರಿಂದ 21 ರವರೆಗೆ ಮೀನುಗಾರಿಕೆಗೆ ತೆರಳದಂತೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ. ಮಂಗಳೂರಿನಿಂದ ಕಾರವಾರದವರೆಗೆ ಸಮುದ್ರದಲ್ಲಿ ಸಂಜೆ.5.30 ರಿಂದ ರಾತ್ರಿ 11.30 ರವರೆಗೆ 2 ಮೀಟರ್ ಎತ್ತರದ ರಕ್ಕಸ ಅಲೆಗಳ ಏಳುವ ಸಾಧ್ಯತೆ ಇದೆ. ನ.18 ರಂದು ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ ಹಾಗೂ ಬಂಗಾಳ ಕೊಲ್ಲಿಯ ಮದ್ಯೆ ಭಾಗದಿಂದ ಗಂಟೆಗೆ 75- 85 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ನ.19 ರಂದು ಅರಬ್ಬಿ ಸಮುದ್ರದ ಆಗ್ನೇಯ ದಿಕ್ಕಿನಿಂದ ನೈರುತ್ಯ ಕಡೆಗೆ ಮತ್ತು 20 ಮತ್ತು 21ರಂದು ಅರಬ್ಬಿ ಸಮುದ್ರದ ಆಗ್ನೇಯ ಹಾಗೂ ಬಂಗಾಳಕೊಲ್ಲಿಯ ನೈರುತ್ಯ ದಿಕ್ಕಿನಿಂದ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಇಲಾಖೆ ಎಚ್ಚರಿಕೆ ನೀಡಿದೆ.
ಗಜ ಚಂಡಮಾರುತ ಅರಬ್ಬೀ ಸಮುದ್ರ ಕಡೇಗೆ ಸಾಗುತ್ತಿರುವುದಲ್ಲದೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗಲಿರುವ ಹಿನ್ನಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಹಾಗೂ ಕರಾವಾರದಲ್ಲ್ಲಿ ನ.19 ರಿಂದ ನ.23 ರವರೆಗೆ ಸಾಧಾರಣ ಮಳೆಯಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ತಿಳಿಸಿದೆ.