ಮಂಗಳೂರು, ನ 18(SM): ಕ್ರಿಕೆಟ್ ಆಟವಾಡುತ್ತಿದ್ದಾಗಲೇ ಕುಸಿದು ಬಿದ್ದು ಕ್ರಿಕೆಟ್ ಪಟುವೊಬ್ಬರು ಮೃತಪಟ್ಟ ದಾರುಣ ಘಟನೆ ಜಪ್ಪಿನಮೊಗರಿನಲ್ಲಿ ನಡೆದಿದೆ. ವೇಗದ ಎಸೆತಗಾರ ಹಾಗೂ ದಾಂಡಿಗ ಭರತೇಶ್ ಬಾಚು ಕುಡ್ತಡ್ಕ ಮೃತ ದುರ್ದೈವಿ.
ನಿರಂತರ ಕ್ರಿಕೆಟ್ ಆಟವಾಡುತ್ತಿದ್ದ ಭರತೇಶ್ ಕಳೆದ 7 ವರ್ಷಗಳಿಂದ ತನ್ನ ವೈಯುಕ್ತಿಕ ಕಾರಣಗಳಿಂದ ಕ್ರಿಕೆಟ್ ನಿಂದ ಸ್ವಲ್ಪ ದೂರ ಸರಿದಿದ್ದರು. 7 ವರ್ಷಗಳ ನಂತರ ಇಂದು ಮತ್ತೆ ಆಟವಾಡಲೆಂದು ಭರತೇಶ್ ಮೈದಾನಕ್ಕೆ ಇಳಿದಿದ್ದಾರೆ. ಅಲ್ಲದೆ, ಮತ್ತದೇ ಹಳೆಯ ಪ್ರದರ್ಶವನ್ನು ನೀಡಿದ್ದಾರೆ. ಆದರೆ, ಅಂತಿಮ ಎಸೆತದಲ್ಲಿ ಪಿಚ್ ನಲ್ಲೇ ಕುಸಿದು ಬಿದ್ದು ಹೃದಯಾಘಾತಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.