ಬೆಂಗಳೂರು, ನ 19(MSP): ಕುಮಾರಸ್ವಾಮಿ ರೈತರಿಗೆ ಹಣ ಕೊಡಿಸಿಲ್ಲ ಎಂದು ಬೀದಿಗೆ ಬಂದಿದ್ದೀಯಲ್ಲ ತಾಯಿ, ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ?, ಎಂದು ಮುಖ್ಯಮಂತ್ರಿ ನಡೆಸಿದ್ದ ವಾಗ್ದಾಳಿಗೆ ಪ್ರತಿಯಾಗಿ ಪ್ರತಿಪಕ್ಷಗಳಿಂದ ತೀವ್ರ ವಿರೋಧ, ಹಾಗೂ ಸಿಎಂ ಕ್ಷಮೆಯಾಚನೆ ಮಾಡಲಿ ಎನ್ನುವ ಒತ್ತಾಯ ಕೇಳಿಬಂದಿದೆ.
ಬೆಳಗಾವಿಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು, ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗೋದಕ್ಕೆ ನಾಲಾಯಕ್ ಎಂದಿದ್ದಾಳೆ. ಆಕೆ ಹೊಲದಲ್ಲಿ ಕೆಲಸ ಮಾಡಿದ್ದಾಳೋ ಇಲ್ಲವೋ ಗೊತ್ತಿಲ್ಲ. ನಾಲ್ಕು ವರ್ಷದಿಂದ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆ ಮಾಲೀಕರಿಗೆ ಚುನಾವಣೆಯಲ್ಲಿ ಮತ ಹಾಕಿ ಇದೀಗ ರೈತರಿಗೆ ಕುಮಾರಸ್ವಾಮಿ ಹಣ ಕೊಡಿಸಿಲ್ಲ ಎಂದು ಬೀದಿಗೆ ಬಂದಿದ್ದಿಯಲ್ಲಾ ತಾಯಿ, ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದೆ ? ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದರು.
ಕಬ್ಬು ಬೆಳೆಗಾರರ ಬಾಕಿ ಪಾವತಿಸುವಂತೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಮಹಿಳಾ ಹೋರಾಟಗಾರ್ತಿ ಜಯಶ್ರೀ ಗುರಣ್ಣವರ ಅವರ ಬಗ್ಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ‘ನಾಲ್ಕು ವರ್ಷಗಳ ಕಾಲ ಎಲ್ಲಿ ಮಲಗಿದ್ದೆ ನೀನು’ ಎಂದು ಅವಹೇಳಕಾರಿ ಮಾತುಗಳಲ್ಲಿ ನಿಂದಿಸಿರುವುದುಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಸಿಎಂ ತಕ್ಷಣ ಕ್ಷಮೆಯಾಚಿಸಬೇಕು ಎಂದು ವಿಪಕ್ಷಗಳ ಮುಖಂಡರು ಆಗ್ರಹಿಸಿದ್ದಾರೆ.
ರೈತರ ಬಗ್ಗೆ, ರೈತ ಮಹಿಳೆಯ ಬಗ್ಗೆಗಿನ ನಿಮ್ಮ ಮಾತುಗಳು ಒಪ್ಪಲಾಗದು. ಎಲ್ಲೆ ಮೀರಿದ ನಿಮ್ಮ ಮಾತಿಗೆ ರೈತರ ಕ್ಷಮೆ ಕೇಳಿ ದೊಡ್ಡವರೆನಿಸಿಕ್ಕೊಳ್ಳಿ’ ಎಂದು ಟ್ವೀಟ್ ಮಾಡಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.
ಇನ್ನು " ರೈತ, ಮಹಿಳೆ ಸೇರಿದಂತೆ ಯಾರ ಬಗ್ಗೆಯೂ ಕೀಳಾಗಿ ಮಾತನಾಡುವುದಕ್ಕೆ ಮಖ್ಯಮಂತ್ರಿಗಳಿಗೆ ಅಧಿಕಾರವಿಲ್ಲ" ಎಂದು ಶಾಸಕ ಎಸ್. ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.