ಮಂಗಳೂರು, ನ 19(SM): ಶಾಲೆಯ ಪಕ್ಕದಲ್ಲೇ ಸಂಗ್ರಹಿಸಿಡಲಾಗಿದ್ದ ಲಾರಿಗಳ ಬೃಹತ್ ಕಂಟೈನರ್ ಬಾಕ್ಸ್ ಗಳು ಶಾಲೆಯ ಮೇಲೆಯೇ ಉರುಳಿ ಬಿದ್ದ ಘಟನೆ ಬೈಕಂಪಾಡಿ ಅಂಗರಗುಂಡಿ ಸರಕಾರಿ ಶಾಲೆಯಲ್ಲಿ ನಡೆದಿದೆ.
ರಾತ್ರಿ ವೇಳೆಯಲ್ಲಿ ಘಟನೆ ನಡೆದ ಕಾರಣ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಂಗರಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಜಮೀನಿನಲ್ಲಿ ಎನ್.ಎಂ.ಪಿ.ಟಿ.ಯಿಂದ ಬಂದ ಬೃಹತ್ ಗಾತ್ರದ ಕಂಟೈನರ್ ಗಳನ್ನು ಖಾಸಗಿ ಸಂಸ್ಥೆಯೊಂದು ಕಳೆದ ಕೆಲವು ವರ್ಷಗಳಿಂದ ಸಂಗ್ರಹಿಸಿಟ್ಟು ವ್ಯವಹಾರ ನಡೆಸುತ್ತಿತ್ತು. ಕಂಟೈನರ್ ಗಳನ್ನು ಒಂದರ ಮೇಲೊಂದರಂತೆ ಇಡಲಾಗಿತ್ತು.
ಸೋಮವಾರ ಬೆಳಿಗ್ಗೆ ಶಾಲೆ ತೆರೆದ ಸಂದರ್ಭದಲ್ಲಿ ಶಾಲೆಯ ಒಂದು ಬದಿಯ ಗೋಡೆಯ ಕಲ್ಲುಗಳು ಕುಸಿದು ಬಿದ್ದಿದ್ದು, ಪರಿಶೀಲಿಸಿದಾಗ ಪಕ್ಕದ ಜಮೀನಿನಲ್ಲಿದ್ದ ಕಂಟೈನರ್ ಗಳು ಶಾಲೆಯ ಮೇಲೆಯೇ ಕುಸಿದು ಬಿದ್ದಿರುವುದು ಕಂಡು ಬಂದಿದೆ. ಇದರಿಂದ ಶಾಲೆಯ ಗೋಡೆ ಬಿರುಕು ಬಿಟ್ಟಿದೆ. ಗೋಡೆಯ ಕೆಲವು ಕಲ್ಲುಗಳು ಉರುಳಿ ಬಿದ್ದಿದೆ. ಅಲ್ಲದೇ ಶಾಲೆಯ ಕಂಪೌಂಡ್ ಸಂಪೂರ್ಣ ಜಖಂಗೊಂಡಿದೆ.
ಸುದ್ದಿ ತಿಳಿದು ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.