ಮಂಗಳೂರು, ನ 20(MSP): ಶಬರಿಮಲೆಗೆ ಎಲ್ಲಾ ವಯೋಮಿತಿಯ ಮಹಿಳೆಯರ ಪ್ರವೇಶದ ಕುರಿತು ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನ್ನು ಬೆಂಬಲಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ತನ್ನ ಲಾಭಕ್ಕಾಗಿ ಈ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಟೀಕಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಿಜೆಪಿ ತೀರ್ಪಿನ್ನು ಮುಂದಿರಿಸಿಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಈ ಮೂಲಕ ಜನರನ್ನು ವಿಭಜನೆ ಮಾಡಲು ನೋಡುತ್ತಿದೆ. ಆದರೆ ಸಾಮಾಜಿಕ ನ್ಯಾಯದ ಪರ ಬಿಜೆಪಿ ನೋಡಿಲ್ಲ. ಪ್ರತಿಯೊಬ್ಬ ಪ್ರಜೆಗೂ ಆತನ ಧಾರ್ಮಿಕತೆಗೆ ಸಂಬಂಧಪಟ್ಟಂತೆ ದೇವಸ್ಥಾನಕ್ಕೆ ಹೋಗುವ ಸ್ವಾತಂತ್ರ್ಯವಿದೆ, ಭಗವಂತನ ವಿಚಾರದಲ್ಲಿ ಲಿಂಗ ತಾರತಮ್ಯವಿಲ್ಲ, ದೇವರು ಮಹಿಳೆ ಮತ್ತು ಪುರುಷರಿಗೆ ಬೇರೆ ಬೇರೆಯೇ ಎಂದು ಪ್ರಶ್ನಿಸಿದರು.
ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದ ಬಿಜೆಪಿ , ಶಬರಿಮಲೆ ವಿಚಾರ ಬಂದಾಗ ಏಕೆ ವಿರೋಧಿಸುತ್ತಿದೆ ? ಧರ್ಮ, ದೇವರು ಇಂತಹ ಸೂಕ್ಷ್ಮ ವಿಚಾರಗಳನ್ನು ರಾಜಕೀಯಗೊಳಿಸುವ ಮೂಲಕ ಸಮುದಾಯಗಳ, ಮಧ್ಯೆ ವಿಷ ಬೀಜ ಬಿತ್ತುತ್ತಿದೆ ಎಂದು ಹೇಳಿದರು.