ಮೂಡುಬಿದಿರೆ, ನ 20(MSP): ಆಳ್ವಾಸ್ ನುಡಿಸಿರಿ ಸಂದರ್ಭ ನುಡಿಸಿರಿಯ ಅಧ್ಯಕ್ಷತೆ ವಹಿಸಿದ್ದ ಮಲ್ಲಿಕಾ ಘಂಟಿ , ಶಬರಿಮಲೆಯಲ್ಲಿ ಎಲ್ಲಾ ವಯೋಮಾನದ ಹೆಣ್ಣುಮಕ್ಕಳಿಗೆ ಪ್ರವೇಶ ನೀಡದಿರುವುದನ್ನು ಸರಿಯಲ್ಲ ಎಂಬ ಸಮರ್ಥನೆ ಮಾಡಿ ಭಕ್ತರು ಮತ್ತು ದೇವಳದ ಧಾರ್ಮಿಕ ನಿಲುವುಗಳಿಗೆ ಅಪಚಾರ ಮಾಡಿದ್ದು, ಅದನ್ನು ಖಂಡಿಸಿ ಅಯ್ಯಪ್ಪ ಭಕ್ತ ವೃಂದ ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ.ಎ ಮೋಹನ್ ಆಳ್ವ ಅವರಿಗೆ ಖಂಡನಾ ಪತ್ರ ಬರೆದು ದೂರು ನೀಡಿದೆ.
ಮಹಿಳೆಯರು ಋತುಚಕ್ರದ ಸಮಯದಲ್ಲಿ ದೇವಸ್ಥಾನ ಹಾಗೂ ಮನೆಯ ದೇವರ ಕೋಣೆಯನ್ನು ಪ್ರವೇಶಿಸುವುದಿಲ್ಲ. ಸಾಹಿತ್ಯದ ವೇದಿಕೆಯಲ್ಲಿ ಧಾರ್ಮಿಕತೆಯನ್ನು ಎಳೆದು ತಂದು ಮಾತನಾಡಿರುವುದು ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದ್ದು ಬಿಟ್ಟರೆ ಅಲ್ಲಿ ಸಮಾನತೆ, ಸಾಮಾಜಿಕ ಕಳಕಳಿಯ ನಿಲುವು ಇರಲಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಘಂಟಿಯವರು ಶಬರಿಮಲೆ ಬಗ್ಗೆ ಸ್ಪಷ್ಟತೆ ಇಲ್ಲದೆ ಮಾತನಾಡಿರುವುದು ಮೇಲ್ನೋಟಕ್ಕೆ ಖಚಿತವಾಗಿದೆ. ಅಯ್ಯಪ್ಪ ದೇವರ ಲಕ್ಷಾಂತರ ಮಹಿಳಾ ಭಕ್ತರು, ತೀರ್ಮನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದಾರೆ. ಬೆರಳೆಣಿಕೆಯ ಮಹಿಳೆಯರು ಪ್ರಚಾರಗಿಟ್ಟಿಸಿಕೊಳ್ಳವ ಸಲುವಾಗಿ ಇದರ ವಿರುದ್ದವಾಗಿ ಮಾತನಾಡುತ್ತಾರೆ. ಒಂದು ಧರ್ಮದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿ ಆನಂದಿಸುವ ಎಡಪಂಥೀಯರ ನಿಲುವುಗಳನ್ನು ಖಂಡಿಸುವುದಾಗಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಸಂದರ್ಭ ಸುದರ್ಶನ ಎಂ, ರಾಘು ಗುರುಸ್ವಾಮಿ, ನವೀನ್ ಗುರುಸ್ವಾಮಿ, ವಿಶ್ವನಾಥ್ , ಮುರಳೀಧರ್ , ಸತೀಶ್ ಉಪಸ್ಥಿತರಿದ್ದರು.