ಬೆಂಗಳೂರು, ನ 20(MSP):ಕುಖ್ಯಾತ ಸರಗಳ್ಳನ್ನು ಬೆನ್ನಟ್ಟಿ ಹಿಡಿದು ಪಶ್ಚಿಮ ವಿಭಾಗದ ಡಿಸಿಪಿ ರವಿ ಚನ್ನಣ್ಣನವರಿಂದ ಬಹುಮಾನ ಪಡೆದಿದ್ದ ಜ್ಞಾನಭಾರತಿ ಠಾಣೆಯ ಹೆಡ್ ಕಾನ್ಸ್ಟೆಬಲ್ ಇದೀಗ ಮಹಿಳಾ ಹೋಮ್ ಗಾರ್ಡ್ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಜೈಲು ಪಾಲಾಗಿದ್ದಾರೆ.
ಜ್ಞಾನಭಾರತಿ ಠಾಣೆಯ ಮುಖ್ಯಪೇದೆಯಾಗಿರುವ ಚಂದ್ರಕುಮಾರ್ ಅತ್ಯಾಚಾರ ಎಸಗಿದ ಆರೋಪಿ. ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ್ದ ಚಂದ್ರಕುಮಾರ್, ಅತ್ಯಾಚಾರ ಎಸಗಿದ್ದಾರೆ ಎಂದು 27 ವರ್ಷದ ಗೃಹರಕ್ಷಕಿ ದೂರು ನೀಡಿದ್ದರು. ಅದರನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್ಸಿಂಗ್ ರಾಥೋಡ್ ತಿಳಿಸಿದ್ದಾರೆ
ಕೆಲಸದ ಸ್ಥಳದಲ್ಲಿ ಪರಿಚಯವಾಗಿದ್ದ ಗೃಹರಕ್ಷಕಿಯನ್ನು, ಕೆಲಸ ಮುಗಿಸಿ ಹೊರಟ ಸಮಯದಲ್ಲಿ ಡ್ರಾಪ್ ಕೊಡುವುದಾಗಿ ಹತ್ತಿಸಿಕೊಂಡು ಹೋಗುತ್ತಿದ್ದರು. ಆದರೆ ಇದಾದ ಬಳಿಕ ಪದೇ ಪದೇ ಕೆಲಸದ ನೆಪದಲ್ಲಿ ಗೃಹರಕ್ಷಕಿಯ ಬಳಿ ಬಂದು ಚಂದ್ರಕುಮಾರ್ ಹಲವು ಬಾರಿ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಬೇಸತ್ತ ಮಹಿಳೆ, ಉಸ್ತುವಾರಿ ಅಧಿಕಾರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಜ್ಞಾನ ಭಾರತಿ ಪೊಲೀಸ್ ಠಾಣಾ ಅಧಿಕಾರಿಗಳು ಚಂದ್ರಶೇಖರ್ ನನ್ನು ಕರೆಸಿಕೊಂಡು ಎಚ್ಚರಿಕೆ ನೀಡಿ ಬುದ್ದಿವಾದ ಹೇಳಿದ್ದರು.
ಇದಾದ ಬಳಿಕ ಮಹಿಳೆಯ ವಿರುದ್ಧ ವೈಷಮ್ಯ ಸಾಧಿಸುತ್ತಿದ್ದ ಚಂದ್ರಶೇಖರ್ ಆಕೆಯ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಬಾಗಿಲು ಬಡಿದಿದ್ದಾನೆ. ತಮ್ಮ ಪತಿಯೇ ಮನೆಗೆ ಬಂದಿರಬಹುದೆಂದು ಮಹಿಳೆ ಬಾಗಿಲು ತೆಗೆದಿದ್ದಾಗ ಏಕಾಏಕಿ ಮನೆ ಒಳಗೆ ನುಗ್ಗಿ ಅತ್ಯಾಚಾರ ಎಸಗಿದ್ದಾನೆ ಎಂದು ಈ ಬಗ್ಗೆ ಗೃಹರಕ್ಷಕಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.
ಕಳ್ಳನನ್ನು ಹಿಡಿದು 1 ಲಕ್ಷ ನಗದು ಬಹುಮಾನ ಪಡೆದಿದ್ದ ಅದೇ ಚಂದ್ರಕುಮಾರ್, ಇದೀಗ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದಾನೆ.