ಬೆಂಗಳೂರು, ನ 20(MSP):ಬಾಲಿವುಡ್ ನಟಿ ನವವಿವಾಹಿತೆ ದೀಪಿಕಾ ಪಡುಕೋಣೆ ಮದುವೆಯಾದ ಬಳಿಕ ಮೊದಲ ಬಾರಿಗೆ ಪತಿ ರಣ್ವೀರ್ ಸಿಂಗ್ ಅವರ ಜೊತೆ ತನ್ನ ತವರೂರಿಗೆ ಆಗಮಿಸಿದ್ದಾರೆ. ಕನ್ನಡತಿಯಾದ ದೀಪಿಕಾ ತವರು ಬೆಂಗಳೂರಾಗಿರುವುದರಿಂದ ನ.21 ರಂದು ಬೆಂಗಳೂರಿನಲ್ಲಿ ಅದ್ದೂರಿಯಲ್ಲಿ ರಿಸೆಪ್ಷನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇಂದು ಶ್ವೇತ ವರ್ಣದ ಉಡುಗೆ ತೊಟ್ಟು ಮುಂಬೈನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನವ ದಂಪತಿಗಳು ಫೋಟೋಗಳಿಗೆ ಪೋಸ್ ನೀಡಿದರು. ನವ ವಧು ವರರ ಮುಖದಲ್ಲಿ ಮದುವೆ ಕಳೆ ಕಂಗೊಳಿಸುತ್ತಿದ್ದು, ನೋಡುಗರ ಕಣ್ಣಿಗೆ ಹಬ್ಬದಂತಿತ್ತು. ಬಿಳಿ ಬಣ್ಣದ ಅನಾರ್ಕಲಿಯಲ್ಲಿ ದೀಪಿಕಾ ಧರಿಸಿದ್ರೆ ಅದಕ್ಕೊಪ್ಪುವಂತೆ ರಣ್ವೀರ್ ಸಿಂಗ್ ಕೂಡ ಬಿಳಿ ಕುರ್ತಾ, ಪೈಜಾಮಾ ಹಾಗೂ ನೆಹರೂ ಕೋಟ್ನಲ್ಲಿ ಕಂಗೊಳಿಸುತ್ತಿದ್ದರು. ಇನ್ನು ದೀಪಿಕಾ ಕೊರಳಲ್ಲಿ ಮಂಗಳಸೂತ್ರ ಹಾಗೂ ಕೈಯಲ್ಲಿ ಕೆಂಪು ಬಳೆ ಆಕೆಯ ಅಂದವನ್ನು ದುಪ್ಪಟ್ಟಾಗಿಸಿತ್ತು.
ವಿವಾಹವಾದ ನಂತರ ಮೊದಲ ಬಾರಿಗೆ ಆಗಮಿಸಿದ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಕಣ್ತುಂಬಿಕೊಳ್ಳಲು ಅಭಿಮಾನಗಳ ದಂಡೇ ಕೆಐಎಎಲ್ ಗೆ ಆಗಮಿಸಿತ್ತು. ಸುಮಾರು 12ಗಂಟೆಗೆ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತ ಆಗಮಿಸಿದ್ದರು. ನಾಳೆ ಲೀಲಾ ಪ್ಯಾಲೇಸ್ನಲ್ಲಿ ನವದಂಪತಿಯ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ನಾಳೆ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿ ತಾರೆಯರು ಹಾಗೂ ಗಣ್ಯಾತಿ ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ನವೆಂಬರ್ 28ರಂದು ಮುಂಬೈನಲ್ಲಿ ಮತ್ತೊಂದು ರಿಸೆಪ್ಷನ್ ಏರ್ಪಡಿಸಲಾಗಿದೆ.