ಮಂಗಳೂರು, ನ 20(MSP): ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶವನ್ನು ಕಲ್ಪಿಸಿ ಸುಪ್ರೀಂಕೋರ್ಟ್ ಆದೇಶಿಸಿದ್ದ ಬಳಿಕ ಏರ್ಪಟ್ಟಿರುವ ಪ್ರಕ್ಷುಬ್ದ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಅವರಿಗೆ ಬಿಜೆಪಿ ರಾಷ್ಟ್ರೀಯ ಸಮಿತಿ ಸೂಚನೆ ನೀಡಿದ್ದರಿಂದ ನಳಿನ್ ಮಾಲಾಧಾರಿಯಾಗಿ ಕೇರಳಕ್ಕೆ ತೆರಳಿದ್ದಾರೆ.
ಇಂದು ಮುಂಜಾನೆ ಕೇರಳದ ಚೆಂಗನ್ನೂರು ತಲುಪಿದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಸಂಸದ ವಿ.ಮುರಳೀಧರನ್ , ರಾಜ್ಯ ಕಾರ್ಯದರ್ಶಿ ಜೆ.ಆರ್. ಪದ್ಮಕುಮಾರ್ ಮತ್ತು ಪಥನಂತಿಟ್ಟ ಜಿಲ್ಲೆಯ ಅಧ್ಯಕ್ಷ ಅಶೋಕನ್ ಜೊತೆ ಚರ್ಚೆ ನಡೆಸಿದರು.
ಶಬರಿಮಲೆಗೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲಿರುವ ಕೇರಳ ಸಹ ಪ್ರಭಾರಿ ನಳಿನ್ ಕುಮಾರ್ ನಿಲಕ್ಕಲ್, ಪಂಪಾ ಹಾಗೂ ಸನ್ನಿದಾನ ಪ್ರದೇಶಗಳಿಗೆ ಭೇಟಿ ನೀಡಿ ಅಯ್ಯಪ್ಪ ಭಕ್ತರ ಸಮಸ್ಯೆಗಳ ಸದ್ಯ ಅಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ವರದಿ ತಯಾರಿಸಲಿದ್ದಾರೆ. ಆದರೆ ಕೇರಳ ಪೊಲೀಸರು ಶಬರಿಮಲೆಗೆ ಭೇಟಿ ನೀಡಿರುವ ಸಂಸದ ನಳಿನ್ ಕುಮಾರ್ ಕಟೀಲ್ , ರಾಜ್ಯ ಸಭಾ ಸದಸ್ಯ ವಿ.ಮುರಳೀಧರನ್ ಸೇರಿದಂತೆ ತಂಡ ದಲ್ಲಿರುವ ಎಲ್ಲಾ ಬಿಜೆಪಿ ಮುಖಂಡರನ್ನು ಬಂಧಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.