ಧರ್ಮಸ್ಥಳ, ನ 20(SM): ಡಿಸೆಂಬರ್ ತಿಂಗಳಲ್ಲಿ 2 ರಿಂದ 6ರ ವರೆಗೆ ಧರ್ಮಸ್ಥಳದಲ್ಲಿ ನಡೆಯಲಿರುವ ಲಕ್ಷ ದೀಪೋತ್ಸವ ಹಾಗೂ 2019ರ ಫೆ. 9ರಿಂದ 18ರ ವರೆಗೆ ನಡೆಯುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಹಿನ್ನೆಲೆ ಪೂರ್ವಭಾವಿ ಸಭೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ನೇತೃತ್ವದಲ್ಲಿ ಮಂಗಳವಾರದಂದು ನಡೆಯಿತು.
ಈ ಎರಡು ಸಂಭ್ರಮಗಳು ಅಪೂರ್ವ ಸಂದರ್ಭವಾಗಳಾಗಿದ್ದು, ಇಲ್ಲಿಗೆ ಬರುವ ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆಯೊಂದಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಜಿಲ್ಲೆಗೆ ಹಾಗೂ ಸರಕಾರಕ್ಕೆ ಸಿಕ್ಕಿದ ಉತ್ತಮ ಅವಕಾಶ ಇದಾಗಿದ್ದು ಎಲ್ಲಾ ಇಲಾಖಾ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ಬದ್ಧತೆಯಿಂದ ಕಾಲಮಿತಿಯೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವ ಯು.ಟಿ. ಖಾದರ್ ಹೇಳಿದರು.
ರಸ್ತೆ ಕಾಮಗಾರಿ, ಆರೋಗ್ಯ ಸೇವೆ, ಕುಡಿಯುವ ನೀರು ಸರಬರಾಜು, ಭದ್ರತಾ ವ್ಯವಸ್ಥೆ, ನಿರಂತರ ವಿದ್ಯುತ್ ಪೂರೈಕೆ, ಸ್ವಚ್ಛತೆ, ಸಾರಿಗೆ ಮತ್ತು ಸಂಪರ್ಕ - ಇತ್ಯಾದಿ ಮೂಲಭೂತ ಸೌಲಭ್ಯ ಒದಗಿಸುವ ಬಗ್ಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಮಾರ್ಗದರ್ಶನ ನೀಡಿದರು. ಕಾಲಮಿತಿಯಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಚಿವರು ಸಲಹೆ ನೀಡಿದರು.
ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಧಿಕಾರಿಗಳೊಂದಿಗೆ ರಸ್ತೆ ಕಾಮಗಾರಿ ಹಾಗೂ ಮಂಜೂರಾದ ಅನುದಾನದ ಬಗ್ಗೆ ಮಾಹಿತಿ ಪಡೆದ ಸಚಿವರು ಧರ್ಮಸ್ಥಳಕ್ಕೆ ಸಂಪರ್ಕ ರಸ್ತೆಗಳಾದ ಮೂಡಬಿದ್ರೆ-ವೇಣೂರು-ಉಜಿರೆ ರಸ್ತೆ ಹಾಗೂ ನಾರಾವಿ-ಗುರುವಾಯನಕೆರೆ ರಸ್ತೆ ಮತ್ತು ಪೆರಿಯಶಾಂತಿ-ಧರ್ಮಸ್ಥಳ ರಸ್ತೆ, ಚಾರ್ಮಾಡಿ ಘಾಟಿ ರಸ್ತೆ ದುರಸ್ತಿ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ರಸ್ತೆ ದುರಸ್ತಿ ಬಗ್ಗೆ ಹತ್ತು ಕೋಟಿ ರೂಪಾಯಿಗಳ ವೆಚ್ಚದ ಪ್ರಸ್ತಾವನೆಯನ್ನು ಈಗಾಗಲೆ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಆದಷ್ಟು ಶೀಘ್ರ ಹಣ ಬಿಡುಗಡೆ ಮಾಡುವಂತೆ ಸಚಿವ ಖಾದರ್ ಲೋಕೋಪಯೋಗಿ ಸಚಿವ ರೇವಣ್ಣ ಹಾಗೂ ಸಚಿವ ಕೃಷ್ಣಭೈರೇ ಗೌಡ ಅವರನ್ನು ಸಭೆಯಲ್ಲಿಯೇ ದೂರವಾಣಿ ಮೂಲಕ ಸಂಪರ್ಕಿಸಿ ವಿನಂತಿಸಿದರು.
ತಕ್ಷಣ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಧಿಕಾರಿಗಳು ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯವರನ್ನು ಭೇಟಿಯಾಗಿ ಕಾಮಗಾರಿ ಪ್ರಗತಿ ಹಾಗೂ ಬೇಕಾದ ಅನುದಾನದ ಬಗ್ಯೆ ಸೂಕ್ತ ಮಾಹಿತಿ ನೀಡಬೇಕು ಎಂದು ಸಚಿವರು ಸಲಹೆ ನೀಡಿದರು.
ಒಂದು ವಾರದೊಳಗೆ ಜಿಲ್ಲಾಡಳಿತದಿಂದ ದೀಪೋತ್ಸವ ಹಾಗೂ ಮಹಾಮಸ್ತಕಾಭಿಷೇಕದ ಸರಕಾರಿ ಚಟುವಟಿಕೆಗಳನ್ನು ಗಮನಿಸುವುದಕ್ಕಾಗಿ ಧರ್ಮಸ್ಥಳಕ್ಕೆ ಒರ್ವ ನೋಡಲ್ ಅಧಿಕಾರಿ ನೇಮಕ ಮಾಡುವುದಾಗಿ ಸಚಿವ ಖಾದರ್ ಪ್ರಕಟಿಸಿದರು.
ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಆರ್. ರವಿಕಾಂತೇ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ ಮತ್ತಿತರರು ಉಪಸ್ಥಿತರಿದ್ದರು.