ಮಂಗಳೂರು,ನ 20(MSP): ಗ್ಯಾಸ್ ತುಂಬಿದ ಟ್ಯಾಂಕರ್ವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ನಗರದ ನಂತೂರು ಸರ್ಕಲ್ ಬಳಿ ನ.22 ರ ಬುಧವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ನಂತೂರು ವೃತ್ತದ ಬಳಿ ಬರುತ್ತಿದ್ದಂತೆ ಪಲ್ಟಿಯಾಗಿತ್ತು.
ಘಟನೆಯಿಂದ ಕುಲಶೇಖರ-ಮಂಗಳೂರು ರಸ್ತೆ ಸೇರಿದಂತೆ ಪಡೀಲ್ ಮಾರ್ಗದವರೆಗೂ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಗ್ಯಾಸ್ ಅನಿಲ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಿದರು. ಬಳಿಕ ಮುಂಜಾಗ್ರತಾ ಕ್ರಮವಾಗಿ ಕುಲಶೇಖದಿಂದ ಮಂಗಳೂರು ರಸ್ತೆ ಸಂಪರ್ಕ ಸ್ಥಗಿತಗೊಳಿಸಿ ಪಡೀಲ್ ಮಾರ್ಗವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು.
ನಂತರ ಗ್ಯಾಸ್ ಟ್ಯಾಂಕರ್ ಅನ್ನು ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ಕ್ರೇನ್ ಬಳಸಿ ಟ್ಯಾಂಕರ್ನ್ನು ರಸ್ತೆಯಿಂದ ತೆರವುಗೊಳಿಸಿದರು. ಗ್ಯಾಸ್ ಸೋರಿಕೆ ಭೀತಿಯಿಂದ ಪರಿಸರದಲ್ಲಿ ವಿದ್ಯುತ್ ಸಂಪರ್ಕವನ್ನು ಸ್ಠಗಿತಗೊಳಿಸಲಾಗಿತ್ತು. ಅದೃಷ್ಟವಶಾತ್ ಯಾವುದೇ ಸೋರಿಕೆ ಕಂಡುಬಂದಿರಲಿಲ್ಲ .