ಬೆಂಗಳೂರು, ನ 21(MSP): ಬಂಟ್ವಾಳದಲ್ಲಿ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಖಂಡಿಸಿ ನಡೆಸಿದ ಪ್ರತಿಭಟನೆ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ , ಸಂಸದ ನಳಿನ್ ಕುಮಾರ್ ಕಟೀಲ್ ಸೇರಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಹಲವು ಮುಖಂಡರ ವಿರುದ್ದ ಪೊಲೀಸರು ದಾಖಲಿಸಿದ್ದ ಎಫ್ ಐ ಆರ್ ಅನ್ನು ಹೈಕೋರ್ಟ್, ಮಂಗಳವಾರ ರದ್ದುಪಡಿಸಿದೆ.
ಪ್ರಕರಣದ ಸಂಬಂಧ ಬಂಟ್ವಾಳ ಪೊಲೀಸರು ದಾಖಲಿಸಿರುವ, ಎಫ್ ಐ ಆರ್ ರದ್ದುಪಡಿಸುವಂತೆ ಕೋರಿ ಸಂಸದ ನಳಿನ್ ಕುಮಾರ್ ಕಟೀಲ್ ಬಂಟ್ವಾಳದ ಶಾಸಕ ರಾಕೇಶ್ ನಾಯ್ಕ್, ಬಜರಂಗದಳದ ಅಧ್ಯಕ್ಷ ಶರಣ್ ಪಂಪ್ ವೆಲ್ , ಹಿಂದೂ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮುರಳೀಕೃಷ್ಣ ಹಂಸತಡ್ಕ, ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಸೇರಿ ೧೩ ಮಂದಿ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಅಶೋಕ್ ಜಿ. ನಿಜಗಣ್ಣನವರ್ ಅವರಿದ್ದ ಪೀಠ, ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ , ಘಟನೆ ಬಳಿಕ ದಕ್ಷಿಣ ಕನ್ನಡ ಡಿಸಿ ಐಪಿಸಿ ದೆಕ್ಷನ್ ೧೪೪ ಜಾರಿಗೊಳಿಸಿದ್ದರು. ಒಂದು ವೇಳೆ ನಿಷೇಧಾಜ್ಞೆ ಉಲ್ಲಂಘನೆಯಾಗಿದ್ದರೂ ಜಿಲ್ಲಾಧಿಕಾರಿಯೇ ಮ್ಯಾಜಿಸ್ಟ್ರೇಟ್ ಎದುರು ದೂರು ಸಲ್ಲಿಸಬೇಕಿತ್ತು. ಆದರೆ ಇಲ್ಲಿ ರಾಜಕೀಯ ಪ್ರೇರಿತರಾಗಿ ಪೊಲೀಸರು ಸ್ವಯಂ ದೂರು ದಾಖಲಿಸಿದ್ದರು ಎಂದರು.ವಾದ ಆಲಿಸಿದ ನ್ಯಾಯಪೀಠ ಪ್ರಕರಣ ದಾಖಲಿಸುವಾಗ ನಿಯಮ ಪಾಲಿಸದ್ದರಿಂದ ಎಫ್ ಐ ಆರ್ ರದ್ದುಗೊಳಿಸಿ ಆದೇಶ ನೀಡಿದೆ.