ಸುಪ್ರೀತಾ ಸಾಲ್ಯಾನ್
ಇನ್ನೇನು ಕಂಬಳ ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗಲೇ, ಕಂಬಳ ಕರೆಯ ಓಟದಲ್ಲಿ ರಾಜ ಮರ್ಯಾದೆಯಿಂದ ಮೆರೆದ “ರಾಕೆಟ್ ಮೋಡೆ” ಖ್ಯಾತಿಯ ಕೋಣವೊಂದು ಇಹಲೋಕ ತ್ಯಜಿಸಿದೆ. ಇದೀಗ ರಾಕೆಟ್ ಮೋಡೆ ಎಂಬ ಹೆಸರಿನ ಕೋಣದ ಸಾವಿಗೆ ಅಸಂಖ್ಯಾತ ಕಂಬಳ ಪ್ರಿಯರು ಕಂಬನಿ ಮಿಡಿದಿದ್ದಾರೆ.
ಎಲ್ಲರ ಬಾಯಲ್ಲೂ ಕುರಿಯಾಲ ಮೋಡೆ, ಕೊಳಚ್ಚೂರು ಮೋಡೆ ಎಂದು ಬಾಯಿ ತುಂಬಾ ಕರೆಸಿಕೊಳ್ಳುತ್ತಿದ್ದ ಮೋಡೆ ಎಂಬ ಹೆಸರಿನ ಕಂಬಳ ಕೋಣವು ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಕೊಳಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ, ನಂದಳಿಕೆ ನವ್ಯತಾ ಶ್ರೀಕಾಂತ್ ಭಟ್ ಮನೆಯ ಸದಸ್ಯನಾಗಿ ಬಹಳ ಪ್ರೀತಿಯಿಂದ ಬೆಳೆದಿದ್ದ. ಮಾತ್ರವಲ್ಲ ಕಂಬಳ ಗದ್ದೆಗೆ ಮೋಡೆ ಇಳಿದನೆಂದರೆ ಸಾಕು, ಎಲ್ಲಾ ಕೋಣಗಳನ್ನು ಓಟದಲ್ಲಿ ಹಿಂದಿಕ್ಕಿ ಚಾಂಪಿಯನ್ ಆಗಿ ಹೊರ ಬರುತ್ತಿದ್ದ. ಆದರೆ ಇದೀಗ ಕಂಬಳ ಗದ್ದೆಯಲ್ಲಿ ಸಾಕಷ್ಟು ಸಾಧನೆ ಮಾಡಿ, ಬಿರುದು ಗಳಿಸಿದ್ದ ಮೋಡೆ ಇಹಲೋಕ ತ್ಯಜಿಸಿದ್ದಾನೆ.
ಕಂಬಳದ ಬಗೆಗೆ 10ಕ್ಕೂ ಮಿಕ್ಕಿ ವರ್ಷಗಳ ಅನುಭವ ಮೋಡೆಗಿದೆ. ಮೋಡೆ ಕಂಬಳ ಕರೆಯಲ್ಲಿ ಅದೆಷ್ಟು ಪಳಗಿದ್ದನೆಂದರೆ, ಕಂಬಳ ಕರೆಯ ಪ್ರತಿಯೊಂದು ನಿಯಮಗಳು ಅವನಿಗೆ ತಿಳಿದಿತ್ತು. ಎಲ್ಲ ಕಂಬಳದ ನಿಯಮಗಳನ್ನು ಮೋಡೆ ಚಾಚು ತಪ್ಪದೇ ಪಾಲಿಸುತ್ತಿದ್ದ. ಮಾತ್ರವಲ್ಲ, ಉಳಿದ ಕಂಬಳ ಕೋಣಗಳಿಗೆ ಮಾದರಿಯಾಗಿದ್ದ.
ಕಂಬಳ ಕರೆಯಲ್ಲಿ ಮೋಡೆಗೆ ಜೊತೆಯಾಗಿ ಸಾಥ್ ನೀಡುತ್ತಿದದ್ದು ಚೆನ್ನ ಎಂಬ ಹೆಸರಿನ ಕೋಣ. ಒಂದೇ ಹಟ್ಟಿಯಲ್ಲಿ ಮೋಡೆ ಮತ್ತು ಚೆನ್ನ ಜೊತೆಯಾಗಿ ಬೆಳೆದಿದ್ದರು. ಈ ಎರಡೂ ಕೋಣಗಳು ಕಂಬಳ ಗದ್ದೆಗೆ ಜೊತೆಯಾಗಿ ಇಳಿದಾಗ ಕಂಬಳ ಕರೆಯ ಸೊಬಗು ಇಮ್ಮಡಿಯಾಗುತ್ತಿತ್ತು. ಮಾತ್ರವಲ್ಲ ಮೋಡೆ ಮತ್ತು ಚೆನ್ನ ಅನೇಕ ಕಂಬಳ ಕರೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. ಇದೀಗ ಚೆನ್ನ ಮೋಡೆಯ ಅಗಲುವಿಕೆಯಿಂದ ಮೌನವಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ 100ಕ್ಕೂ ಮಿಕ್ಕಿ ಕಂಬಳಗಳಲ್ಲಿ ಅನೇಕ ಬಿರುದುಗಳನ್ನು ಪಡೆದಿದ್ದ ಮೋಡೆ, ಬೇರೆ ಬೇರೆ ಕಂಬಳ ಕರೆಗಳಲ್ಲಿ ಚಿನ್ನದ ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದ. ಪ್ರತಿಯೊಂದು ಕಂಬಳ ಕರೆಯಲ್ಲಿಯೂ ಇವನು ತನ್ನ ಹೆಸರನ್ನು ಪದಕ ಪಟ್ಟಿಯಲ್ಲಿ ಸೇರಿಸಿ, ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದ. ಕಂಬಳ ಕರೆಯಲ್ಲಿ ಕೆಸರಿನ ನೀರನ್ನು ಮುಗಿಲಿನ ಎತ್ತರಕ್ಕೆ ಹಾರಿಸಿ ದೊರೆಯಂತೆ ಮೆರೆದಿದ್ದ. ಆದರೆ ಇದೀಗ ಕಂಬಳ ಗದ್ದೆಯಲ್ಲಿ ಮೋಡೆಯ ಓಟ ನಿಂತಿದೆ. ಮೋಡೆ ಕಂಬಳ ಕರೆಯಲ್ಲಿ ಪಡೆದುಕೊಂಡ ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಬಿರುದುಗಳು ಕೇವಲ ನೆನಪಾಗಿ ಉಳಿದಿದೆ.
ಮಣಿಪಾಲದ ನಂದಳಿಕೆ ನವ್ಯತಾ ಶ್ರೀಕಾಂತ್ ಭಟ್ ಅವರ ಹಟ್ಟಿಯಲ್ಲಿದ್ದ ಮೋಡೆ ಅನಾರೋಗ್ಯಕ್ಕೆ ತುತ್ತಾಗಿ ದೇವರ ಪಾದ ಸೇರಿದೆ. ರಾಕೆಟ್ ಮೋಡೆಗೆ ಅಂತಿಮ ವಿಧಿ ವಿಧಾನಗಳನ್ನು ನಡೆಸಿ ಅಸಂಖ್ಯಾತ ಕಂಬಳ ಪ್ರಿಯರು ವಿದಾಯ ಹೇಳಿದ್ದಾರೆ.
ವಿಶೇಷವೆಂದರೆ ಕಂಬಳ ಗದ್ದೆಯಲ್ಲಿ ಪ್ರಶಸ್ತಿ, ಬಿರುದು ಸೇರಿದಂತೆ ಅನೇಕ ಕಂಬಳ ಅಭಿಮಾನಿಗಳ ಮನೆ ಗೆದ್ದಿರುವ ಮೋಡೆಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಸಂಖ್ಯಾತ ಜನರು ಮೋಡೆ ಸಾವಿಗೆ ಕಣ್ಣೀರು ಸುರಿಸಿದ್ದಾರೆ. ಮಾತ್ರವಲ್ಲ, ವಾಟ್ಸಪ್, ಫೇಸ್ಬುಕ್ಗಳಲ್ಲಿ ಮೋಡೆಯ ಚಿತ್ರಗಳನ್ನು ಹಾಕಿ ಮತ್ತೊಮ್ಮೆ ಹುಟ್ಟಿ ಬಾ ಎಂದು ಸಂತಾಪ ಸೂಚಿಸಿದ್ದಾರೆ.