ತುಮಕೂರು,ನ 21(MSP): ಹೋಟೇಲ್ ಗಳಲ್ಲಿ ಆಹಾರ ಸೇವಿಸುವಾಗ ಜಿರಳೆಯೋ ಹಲ್ಲಿಯೋ ಸಿಕ್ಕಿದರೆ ತಿನ್ನುವಾತನಿಗೆ ಹೇಗಾಗಿರಬೇಡ? ಗ್ರಾಹಕ ಆ ವ್ಯಾಪಾರಿಯೊಂದಿಗೆ ಜಗಳ ಮಾಡಿ ಆಹಾರ ಅರ್ಧದಲ್ಲಿಯೇ ಬಿಟ್ಟು, ದುಡ್ಡು ವಾಪಸು ಪಡೆದು ಹೋಗಬಹುದು. ಹೆಚ್ಚೆಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿ ಸುಮ್ಮನಾಗಬಹುದು.
ಇಂತಹ ಘಟನೆಯೊಂದು ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ಸಂಜೆ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿ ಡಾ.ಕೆ ರಾಕೇಶ್ ಕುಮಾರ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದಿದ್ದರು. ಕಾರ್ಯಕ್ರಮದ ರೂಪುರೇಷೆ, ಸಿದ್ದತೆ, ಎಲ್ಲವನ್ನು ಚರ್ಚಿಸಿದ ಬಳಿಕ ಅಲ್ಲಿಗೆ ಚಹಾ ಹಾಗೂ ಗೋಡಂಬಿ ಬಿಸ್ಕತ್ ವ್ಯವಸ್ಥೆಯಾಯಿತು. ಆದರೆ ಚಹಾ ಸವಿದು ಗೋಡಂಬಿ ಬಿಸ್ಕತ್ ತಿನ್ನಲೆಂದು ಕಚ್ಚಿದಾಗ ಬಾಯಿಯೊಳಗೆ ಸಿಕ್ಕಿದ್ದು, ಕಬ್ಬಿಣದ ಸ್ಕ್ರೂ. ಒಂದು ಕ್ಷಣ ಗೋಡಂಬಿ ಬಿಸ್ಕತ್ ಸವಿಯುತ್ತಿದ್ದ ಜಿಲ್ಲಾಧಿಕಾರಿಗಳಿಗೆ ಪೇಚಿಗೆ ಸಿಲುಕಿದಂತಾಗಿತ್ತು. ಹೊಟ್ಟೆಗೆ ಸೇರುತ್ತಿದ್ದರೆ ಅಪಾಯ ಬೇರೆ..! ಅಲ್ಲದೆ, ನನಗೆ ಸಿಕ್ಕಿದರೆ ಓಕೆ, ಮಕ್ಕಳು ತಿಂದರೆ ಏನು ಗತಿ ಎಂದು ಸಿಡಿಮಿಡಿಗೊಂಡರು.
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣ ಬಳಿಯ ಮಯೂರ ಬೇಕ್ ಲ್ಯಾಂಡ್ ನಿಂದ ಈ ಬಿಸ್ಕತ್ ತರಲಾಗಿತ್ತು. ಸಿಟ್ಟಿಗೆದ್ದ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶ ನೀಡಿದರು. ಡಿಸಿ ಆದೇಶ ಹಿನ್ನಲೆಯಲ್ಲಿ ಎಸಿ ಶಿವಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ರಾತ್ರಿಯೇ ಬೇಕರಿಗೆ ಭೇಟಿ ನೀಡಿ ಅಲ್ಲಿ ತಯಾರಿಸಿದ ಗೋಡಂಬಿ ಬಿಸ್ಕತ್ ನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಇನ್ನು ಕಬ್ಬಿಣದ ಸ್ಕ್ರೂ ಸಿಕ್ಕಿದ್ದರಿಂದ ಬೆಳಗಾಗುವುದರೊಳಗೆ ಆ ಬೇಕರಿಯ ಪರವಾನಿಗೆಯನ್ನೇ ರದ್ದುಪಡಿಸಲಾಗಿದೆ..!