ಬೆಂಗಳೂರು,ನ 21(MSP): ಮುಜರಾಯಿ ಇಲಾಖೆಯ ದೇವಸ್ಥಾನದಲ್ಲಿ ಮದುವೆ ಆಗುವಂತಿಲ್ಲ ಹೌದು, ಮದುವೆ ಮಾತ್ರವಲ್ಲ ನಾಮಕರಣ ಸೇರಿದಂತೆ ದೇಗುಲದಲ್ಲಿ ನಡೆಯುವ ಇತರೆ ಕಾರ್ಯಕ್ರಮಗಳಿಗೂ ಮುಜರಾಯಿ ಇಲಾಖೆ ನಿಷೇಧವನ್ನು ಹೇರಲು ಚಿಂತನೆ ನಡೆಸಿದೆ ಎನ್ನುವಂತಹ ಸುದ್ದಿಯೊಂದು ಹೊರಬಿದ್ದಿದೆ.
ಇದು ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆ ಆಗೋ ಮಂದಿಗೆ ದೊಡ್ಡ ಶಾಕ್ ನೀಡಿದೆ. ದೇವಸ್ಥಾನದಲ್ಲಿ ನಡೆದ ಹಲವು ಪ್ರೇಮ ವಿವಾಹ, ಅಪ್ರಾಪ್ತರ ವಿವಾಹ ಪ್ರಕರಣಗಳಲ್ಲಿ ದೇವಸ್ಥಾನದಲ್ಲಿ ಕೆಲಸ ಮಾಡುವ ಪುರೋಹಿತರೇ ಸಾಕ್ಷಿಯಾಗಬೇಕಿರುವುದರಿಂದ ಇದರಿಂದ ಸಾಕಷ್ಟು ಮಂದಿಗೆ ಕಾನೂನಿನ ಸಂಕಷ್ಟ ಎದುರಿಸಬೇಕಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ವಿವಾಹದ ಬಳಿಕ ಪೋಷಕರು ದೂರು ನೀಡುತ್ತಾರೆ ಈ ಸಂದರ್ಭ ಮದುವೆ ನಡೆಸಿಕೊಟ್ಟ ಅರ್ಚಕರಿಗೆ ಸಾಕ್ಷಿಯೆಂದು ಪೊಲೀಸರು ಸಮನ್ಸ್ ಜಾರಿ ಮಾಡುತ್ತಾರೆ. ಅಲ್ಲದೆ ಕೆಲವೆಡೆ ಪುರೋಹಿತರಿಗೆ ಬೆದರಿಸಿ ವಿವಾಹ ಮಾಡುವಂತೆ ಒತ್ತಡಗಳು ಬಂದ ಕಾರಣ, ಎಲ್ಲಾ ಅರ್ಚಕರು ಸೇರಿ ಮುಜರಾಯಿ ಇಲಾಖೆಗೆ ಮದುವೆ ಕಾರ್ಯಕ್ರಮಗಳನ್ನು ನಿಷೇಧಿಸಬೇಕೆಂದು ಮನವಿ ಮಾಡಿದ್ದರು.
ಆರ್ಚಕರ ಮನವಿಯನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ, ದೇಗುಲದಲ್ಲಿ ಮದುವೆ ಆಗಲಿಚ್ಚಿಸುವವರು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಆಗಿ 30 ದಿನಗಳ ಬಳಿಕ ವಿವಾಹವಾಗಬಹುದೆಂಬ ಷರತ್ತು ವಿಧಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.