ಉಡುಪಿ, ಅ 15: ಪತ್ರಕರ್ತೆ ಗೌರಿ ಹತ್ಯೆಯ ಆರೋಪಿಗಳ ಶಂಕಿತ ಚಿತ್ರಗಳನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಒಬ್ಬಾತನ ಹಣೆ ಮೇಲೆ ಕುಂಕುಮವನ್ನು ಚಿತ್ರಿಸುವ ಮೂಲಕ ಆರೋಪಿಗಳು ಹಿಂದೂ ಸಂಘಟನೆಗಳಿಗೆ ಸೇರಿದವರು ಎಂದು ಬಿಂಬಿಸುವ ರಾಜಕೀಯವನ್ನು ಸರ್ಕಾರ ಮಾಡುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ. ಆರೋಪಿಸಿದ್ದಾರೆ.
ಅವರು ರವಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗೌರಿ ಅವರ ಹತ್ಯೆಯ ಬಗ್ಗೆ ನಮಗೂ ದುಃಖ ಇದೆ. ನಮಗೆ ಹತ್ಯೆ ಅಥವಾ ಹಿಂಸೆಯಲ್ಲಿ ನಂಬಿಕೆ ಇಲ್ಲ. ಗೌರಿ ಅವರ ಹತ್ಯೆಯ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ನಾವೂ ಬಯಸುತ್ತೇವೆ ಎಂದವರು ಹೇಳಿದರು.
ಕರ್ನಾಟಕದಲ್ಲಿ ಇಂತಹ ಘಟನೆಗಳು ನಡೆದಾಗ ಹಿಂದೂ ಸಂಘಟನೆಗಳ ಮೇಲೆ ಆರೋಪ ಹೊರಿಸಲಾಗುತ್ತಿದೆ. ಎಂ.ಎಂ.ಕಲಬುರ್ಗಿ ಅವರ ಹತ್ಯೆಯಾದಾಗಲೂ ಹಿಂದೂ ಸಂಘಟನೆಗಳ ಹೆಸರನ್ನು ಹೇಳಲಾಗಿತ್ತು. ಅದೂ ಸುಳ್ಳೆಂದು ಸಾಬೀತಾಯುತು. ಟಿಪ್ಪು ಜಯಂತಿ ಸಂದರ್ಭದಲ್ಲಿ ಕುಟ್ಟಪ್ಪ ಅವರ ಸಾವು ಸಹಜ ಸಾವು ಎಂದು ಸರ್ಕಾರ ಸಾಬೀತು ಮಾಡುವುದಕ್ಕೆ ಬಹಳ ಪ್ರಯತ್ನ ಮಾಡಿತು, ಅದರಲ್ಲೂ ವಿಫಲ ಆಯಿತು. ಈಗಿನ ಆರೋಪ ನಮಗೇನೂ ಹೊಸತು ಎನ್ನಿಸುತ್ತಿಲ್ಲ. ಆದರೇ ಸತ್ಯ ಹೊರಗೆ ಬಂದೇ ಬರುತ್ತದೆ, ಸೂರ್ಯನನ್ನು, ಸತ್ಯವನ್ನೂ ತುಂಬಾ ಹೊತ್ತು ಮುಚ್ಚಿಡುವುದಕ್ಕಾಗುವುದಿಲ್ಲ. ಆದರೇ ತನಿಖೆಯನ್ನು ಸರಿಯಾದ ದಾರಿಯಲ್ಲಿ ನಡೆಸಬೇಕು ಎಂದವರು ಆಗ್ರಹಿಸಿದರು.
ಭಜರಂಗದಳ, ವಿಶ್ವಹಿಂದೂ ಪರಿಷತ್ ಗಳನ್ನು ಈ ಹಿಂದೆಯೂ ಈ ದೇಶದಲ್ಲಿ ನಿಷೇಧಿಸುವ ಪ್ರಯತ್ನಗಳು ನಡೆದಿವೆ. ಆದರೇ ಜನರಿಗೆ ಈ ಸಂಘಟನೆಗಳ ಮೇಲೆ ನಂಬಿಕೆ ಇದೆ. ಆದ್ದರಿಂದ ನಿಷೇಧ ಸಾಧ್ಯವಾಗಿಲ್ಲ. ಈಗ ಪುನಃ ಅಂತಹ ರಾಜಕೀಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದೂ ವಿಫಲವಾಗುತ್ತದೆ ಎಂದವರು ಹೇಳಿದರು.
ಮೌಡ್ಯ ಅಲ್ಲ ನಂಬಿಕೆ ನಿಷೇಧ:
ರಾಜ್ಯ ಸರ್ಕಾರ ಮೌಢ್ಯ ನಿಷೇಧಿಸುವ ನೆಪದಲ್ಲಿ ಹಿಂದುಗಳ ನಂಬಿಕೆಗಳನ್ನು ನಿಷೇಧಿಸುವುದಕ್ಕೆ ಹೊರಟಿದೆ, ಇದು ಸರಿಯಲ್ಲ, ಹಿಂದೂಗಳಲ್ಲಿ ಮೌಢ್ಯಗಳಿಲ್ಲ, ನಂಬಿಕೆಗಳಿವೆ. ಆದರೇ ಬೈಬಲ್ ಭೂಮಿ ಚಪಟ್ಟೆ ಇದೆ ಎನ್ನುತ್ತದೆ, ಮಿಶನರಿಗಳು ಇವತ್ತಿಗೂ ಅದನ್ನು ಪ್ರತಿಪಾದಿಸುತ್ತಾರೆ, 13 ಸಂಖ್ಯೆ ಅಪಶಕುನ ಎನ್ನುವುದು ಇಂಗ್ಲೆಂಡ್ ನಿಂದ ಬಂದಿದೆ. ಇದೆಲ್ಲವೂ ಮೌಡ್ಯಗಳು ಎಂದು ವಿಜ್ಞಾನವೇ ಹೇಳುತ್ತದೆ, ಇದನ್ನು ನಿಷೇಧಿಸಬೇಕು ಎಂದ ಅವರು ಸರ್ಕಾರ ಹಿಂದುಗಳ ಮುದ್ರಾಧಾರಣೆಯಂತಹ ನಂಬಿಕೆಗಳನ್ನು ನಿಷೇಧಿಸುವುದಕ್ಕೆ ಹೊರಟಿದೆ. ಇಂತಹ ಧಾರ್ಮಿಕ ನಂಬಿಕತೆಗಳ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು, ಈ ನಿಷೇಧದ ಕಾಯ್ಕೆಯನ್ನು ಕೈಬಿಡಬೇಕು ಎಂದು ಗೋಪಾಲ್ ಜಿ. ಆಗ್ರಹಿಸಿದರು.