ತಿರುವನಂತಪುರ,ನ 22(MSP): ಸುಪ್ರೀಂ ತೀರ್ಪಿನ ನಂತರ ಉದ್ವಿಗ್ನ ಪ್ರದೇಶವಾಗಿರುವ ಶಬರಿಮಲೆಯ ಪಂಪಾ ಪ್ರದೇಶಕ್ಕೆ ತಮ್ಮ ಖಾಸಗಿ ವಾಹನದಲ್ಲಿ ತೆರಳಲು ಅವಕಾಶ ನೀಡಬೇಕೆಂದ ಕೇಂದ್ರ ಸಚಿವ ಪೊನ್ ರಾಧಕೃಷ್ಣನ್ ಅವರಿಗೆ ದಾವಣಗೆರೆಯ ಹುಡುಗ ಕನ್ನಡದ ಕುವರ ಎಸ್ ಪಿ ಯತೀಶ್ ಚಂದ್ರ ಬೆವರಿಳಿಸಿದ ಘಟನೆ ನಡೆದಿದೆ. ಕೊನೆಗೆ ಅನಿವಾರ್ಯವಾಗಿ ಸಚಿವರು ರಾಜ್ಯ ರಸ್ತೆ ಸಾರಿಗೆ ಬಸ್ ಮೂಲಕ ಪಂಪಾ ತಲುಪಿದ್ದಾರೆ. ಈ ಘಟನೆಯಿಂದ ಬಿಜೆಪಿ ಈವರೆಗೆ ಹೊಗಳುತ್ತಿದ್ದ ಅಧಿಕಾರಿ ಎಸ್ ಪಿ ಯತೀಶ್ ಚಂದ್ರ ಅವರಿಂದ ಮುಜುಗರಕ್ಕೆ ಒಳಗಾಗಿದ್ದರೆ, ಅವರನ್ನು ಕಂಡರೆ ಕೆಂಡಕಾರುತ್ತಿದ್ದ ಎಡರಂಗ ಈಗ ಅವರ ನಡೆಗೆ ಮೆಚ್ಚುಗೆ ಸೂಚಿಸಿದೆ.
ಅಂದ ಹಾಗೆ ಎಸ್ ಪಿ ಯತೀಶ್ ಚಂದ್ರ ಕರ್ನಾಟಕದ ಬೆಣ್ಣೆ ದೋಸೆಯ ಊರು ದಾವಣಗೆರೆಯ ಹುಡುಗ.. ಕಾನೂನು ಪಾಲಿಸುವವರಿಗೆ ಬೆಣ್ಣೆಯಂತೆ, ಕಾನೂನು ಕೈಗೆತ್ತಿಗೊಂಡವರ ಪಾಲಿಗೆ ಕೆಂಡದಂತೆ ಕಾಡುವ ಇವರಿಗೆ ಜನಸಾಮಾನ್ಯರೇ, ಸಾಮಾಜಿಕ ಜಾಲತಾಣದ ಮೂಲಕ ಕೇರಳದ ಸಿಂಗಂ ಎಂದು ಕರೆದಿದ್ದಾರೆ. ಶಬರಿಮಲೆಯ ವಿಚಾರವಾಗಿ ದೇವರ ನಾಡಿನಲ್ಲಿ ಎದ್ದಿದ್ದ ಪ್ರತಿಭಟನೆ,ಗಲಾಟೆ ಹಿಂಸಾಚಾರವನ್ನು ತಣ್ಣಾಗಾಗಿಸಿದ ಕೀರ್ತಿ ನಿಜಕ್ಕೂ ಈ ಸಿಂಗಂಗೆ ಸಲ್ಲಬೇಕು..
ದಾವಣಗೆರೆಯ ವಿದ್ಯಾನಗರ ನಿವಾಸಿ ಹಾಲಪ್ಪ ಮತ್ತು ಗಂಗಮ್ಮ ಅವರ ಪುತ್ರರಾಗಿರುವ ಯತೀಶ್ ಚಂದ್ರ, ತಮ್ಮ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ತರಳಬಾಳು ಶಾಲೆಯಲ್ಲಿ ಮಾಡಿ ಮುಗಿಸಿ ಬಳಿಕ ಅನುಭವ ಮಂಟಪ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾರೆ. ನಂತರ ದಾವಣಗೆರೆಯ ಬಾಪೂಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದು ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಆದರೆ ಬಾಲ್ಯದಿಂದಲೇ ಪೊಲೀಸ್ ವರಿಷ್ಠಾಧಿಕಾರಿಯಾಗಬೇಕು ಎನ್ನುವ ಕನಸ ಬೆನ್ನುಹತ್ತಿದ ಚಂದ್ರ ಅವರು 2008 ರಲ್ಲಿ ಐ.ಪಿ.ಎಸ್ ಪರೀಕ್ಷೆ ಬರೆಯುತ್ತಾರೆ. ಆದರೆ ಮತ್ತಷ್ಟು ಉತ್ತಮ ಸಾಧನೆ ಮಾಡಬೇಕು ಎಂದು 2011 ಮತ್ತೊಮ್ಮೆ ಪರೀಕ್ಷೆ ಎದುರಿಸಿ ತಮ್ಮ ಕನಸನ್ನು ನನಸಾಗಿಸುತ್ತಾರೆ.
ತರಬೇತಿ ಬಳಿಕ ಕಣ್ಣೂರಿನಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಗಿ ನೇಮಕಗೊಂಡು ಕೇವಲ ಮೂರು ತಿಂಗಳಲ್ಲಿ ಮಲಯಾಳಂ ಭಾಷೆ ಕಲಿತು ಕೇರಳದ ಜನತೆಯ ನಾಡಿಮಿಡಿತ ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ೨೦೧೫ ರಲ್ಲಿ ಪ್ರಧಾನಿ ಮೋದಿ ಕೇರಳ ಭೇಟಿ ಸಂದರ್ಭದಲ್ಲಿ , ಗಲಭೆ ಎಬ್ಬಿಸುವ ಹುನ್ನಾರ ನಡೆದಿದೆ ಎಂದು ಮಾಹಿತಿ ಸಿಕ್ಕಿ ಪ್ರತಿಭಟನೆ ನಡೆಸುತ್ತಿದ್ದ ಎಡರಂಗವನ್ನು ಲಾಠಿ ಚಾರ್ಜ್ ಮಾಡಿ ಚದುರಿಸಿ ಸಂಪೂರ್ಣ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.
ಶಬರಿಮಲೆಗೆ ತೆರಳದಂತೆ ಎಸ್ಪಿ ಯತೀಶ್ ಚಂದ್ರ ಮನವಿ ತಿರಸ್ಕರಿಸಿದ್ದ, ಸುರೇಂದ್ರನ್ ಅವರನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದ, ಖಾಸಗಿ ವಾಹನಕ್ಕೆ ಅವಕಾಶ ನೀಡಿ ಎಂದ ಕೇಂದ್ರ ಸಚಿವ ಪೊನ್ ರಾಧಕೃಷ್ಣನ್ ಅವರಿಗೆ ಆಗಲ್ಲ ಎಂದು ಖಡಕ್ ಆಗಿ ಹೇಳಿ ಶಬರಿಮಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ ಕೀರ್ತಿ ನಿಜಕ್ಕೂ ಕನ್ನಡದ ಕುವರನಿಗೆ ಸಲ್ಲಬೇಕು.