ಮಂಗಳೂರು ನ 22(MSP): ಶಬರಿಮಲೆಯಗೆ ಆಗಮಿಸುವ ಭಕ್ತರಿಗೆ ಯಾವುದೇ ಮೂಲಸೌಕರ್ಯವನ್ನು ಕೇರಳ ಸರಕಾರ ಕಲ್ಪಿಸಿಲ್ಲ. ಅಲ್ಲದೆ ಪೊಲೀಸರ ಮೂಲಕ ಭಕ್ತರನ್ನು ತಡೆಯುವ ಕೆಲಸ ನಡೆಸುತ್ತಾ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಿಸಿದೆ ಎಂದು ಸಂಸದ, ಹಾಗೂ ಕೇರಳದ ಸಹ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀ ಕ್ಷೇತ್ರ ಶಬರಿಮಲೆಯ ವಾಸ್ತವ ಸ್ಥಿತಿಗತಿಗಳ ಬಗ್ಗೆ ಮಂಗಳವಾರ ಅಧ್ಯಯನ ನಡೆಸಿ ಮಂಗಳೂರಿಗೆ ವಾಪಾಸ್ ಆದ ಅವರು ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಭಕ್ತರು ಬೆಟ್ಟದ ಮೇಲೆ ಆರು ಗಂಟೆಗಳ ಕಾಲ ಮಾತ್ರ ಇರಬೇಕೆಂಬ ನಿರ್ಬಂಧ ವಿಧಿಸಲಾಗಿದೆ. ದೇವಾಲಯದ ಆವರಣದಲ್ಲಿ ಘೋಷಣೆ ಕೂಗಿದರೆ ಬಂಧಿಸಲಾಗುತ್ತಿದೆ. ನಾಲ್ಕು ಜನರಿಗಿಂತ ಹೆಚ್ಚು ಮಂದಿ ಗುಂಪುಗೂಡಿದರೂ ಬಂಧಿಸುತ್ತಿದ್ದಾರೆ. 10,000ಕ್ಕೂ ಹೆಚ್ಚುಮಂದಿ ಪೊಲೀಸರನ್ನು ತುಂಬಿಸಲಾಗಿದೆ. ಅಯ್ಯಪ್ಪ ಭಕ್ತರಿಗಿಂತ ಹೆಚ್ಚು ಪೊಲೀಸರೆ ಶಬರಿಮಲೆ ಕ್ಷೇತ್ರದಲ್ಲಿ ಕಾಣಸಿಗುತ್ತಾರೆ ಇದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.
ವರ್ಷಕ್ಕೆ ಆರು ಕೋಟಿ ಭಕ್ತರು ಭೇಟಿ ನೀಡುವ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅಲ್ಲಿನ ಸರ್ಕಾರ ಕ್ರಮ ಕೈಗೊಂಡಿಲ್ಲ. ನಿಲಕ್ಕಲ್ನಲ್ಲಿ ವಾಹನ ನಿಲುಗಡೆಗೆ ಸರಿಯಾದ ವ್ಯವಸ್ಥೆ ಮಾಡಿಲ್ಲ. ಭಕ್ತರ ವಸತಿ, ಸ್ನಾನ ಮತ್ತು ಶೌಚಕ್ಕೆ ಸರಿಯಾದ ವ್ಯವಸ್ಥೆ ಇಲ್ಲ. ಪೊಲೀಸರು ಹಾಗೂ ದೇವಾಲಯದ ಸಿಬ್ಬಂದಿಗೂ ಸೂಕ್ತ ವ್ಯವಸ್ಥೆಗಳಿಲ್ಲ ಎಂದು ದೂರಿದರು.
ಶಬರಿಮಲೆಯಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಹೇಳಿದರೆ ಬಂಧನಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ರಿಟಿಷರ ಆಡಳಿತದ ಕಾಲದಲ್ಲಿ ಕೂಡಾ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ ಎಂದು ನಳಿನ್ ಹೇಳಿದರು.