ಕುಂದಾಪುರ, ನ 22(SM): ಸಂವಿಧಾನದಲ್ಲಿಯೇ ಪಂಚಾಯತ್ಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಪಂಚಾಯತ್ಗಳಿಗೆ ಬಂದ ಹಣ ಬೇರೆ ಬೇರೆ ಕಾರಣಗಳಿಗೆ ಬಳಕೆಯಾಗಬಾರದು. ಪಂಚಾಯತ್ಗಳಿಗೆ ಹಣಕಾಸು ಆಯೋಗದಿಂದ ನೇರವಾಗಿ ಹಣ ಬರಬೇಕು. ಪಂಚಾಯತ್ಗಳಲ್ಲಿ ನಿರ್ಣಯವಾಗಿ, ಅಲ್ಲಿಯೇ ಅನುಷ್ಠಾನವಾಗುವ ಮೂಲಕ ಪಂಚಾಯತ್ಗಳು ಸ್ವಾವಲಂಬಿಯಾಗಬೇಕು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಗೋಪಾಡಿ ಗ್ರಾಮ ಪಂಚಾಯತ್ನಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಡಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. 2020ರ ವೇಳೆಗೆ ಈ ದೇಶದಲ್ಲಿ ಯಾರೂ ಕೂಡಾ ಸ್ವಂತ ಸೂರು ಇಲ್ಲ ಎನ್ನಬಾರದು ಎನ್ನುವ ನೆಲೆಯಲ್ಲಿ ವಸತಿ ರಹಿತರಿಗೆ ವಸತಿ ನೀಡುವ ಕಾರ್ಯಕ್ಕೆ ಕೇಂದ್ರ ಮುಂದಾಗಿದ್ದು, ರಾಜ್ಯವೂ ಸಹಕಾರ ನೀಡಬೇಕು. ಪಂಚಾಯತ್ಗಳಿಗೆ ವಿಶೇಷ ಮಹತ್ವ ಹಾಗೂ ಜವಾಬ್ದಾರಿ ಇದೆ. ಆ ನಿಟ್ಟಿನಲ್ಲಿ ಗೋಪಾಡಿ ಪಂಚಾಯತ್ ಕಾರ್ಯವೈಖರಿ ಶ್ಲಾಘನೀಯ ಎಂದರು.
ರೋಶನಿ ಧಾಮದ ಎದುರುಗಡೆ ಇಂಟರ್ಲಾಕ್ ಅಳವಡಿಕೆಗೆ ಸಂಸದರ ನಿಧಿಯಿಂದ ೫ ಲಕ್ಷ ನೀಡುತ್ತೇನೆ. ಸಮುದಾಯವೊಂದನ್ನು ಮೇಲೆತ್ತುವ ದೊಡ್ಡ ಜವಾಬ್ದಾರಿಗೆ ಪಂಚಾಯತ್ ಮುಂದಾಗಿದೆ. ಕೊರಗ ಜನಾಂಗವನ್ನು ಉಳಿಸುವ ನಿಟ್ಟಿನಲ್ಲಿ ಮಧ್ಯ ಶಾಲೆ ಬಿಟ್ಟವರಿಗೆ ಟ್ಯೂಷನ್ ನೀಡಿ ಎಸ್.ಎಸ್.ಎಲ್.ಸಿ ಪರೀಕ್ಷಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಅಳವಡಿಸಿಕೊಂಡಿರುವುದು ಮಾದರಿಯಾಗಿದೆ. ಐಟಿಡಿಪಿಯಿಂದಲೂ ಕೂಡಾ ಕೊರಗ ಸಮುದಾಯದ ಅಭಿವೃದ್ದಿಗೆ ಸಾಕಷ್ಟು ಅನುದಾನ ಸಿಗುತ್ತಿದೆ. ಅದನ್ನು ಬಳಸಿಕೊಳ್ಳಬೇಕೆಂದರು.
ವಿಧಾನ ಪರಿಷತ್ ವಿಪಕ್ಷ ನಾಯಕ ಶ್ರೀನಿವಾಸ ಪೂಜಾರಿ ಮಾತನಾಡಿ, ಪಂಚಾಯತ್ಗಳಿಗೆ ಇನ್ನಷ್ಟು ಶಕ್ತಿ ಬರಬೇಕಾದರೆ, ಒಗ್ಗಟ್ಟಿನ ಹೋರಾಟದ ಅಗತ್ಯವಿದೆ. ಗ್ರಾಮ ಪಂಚಾಯತ್ ನ ಅನೇಕ ಬೇಡಿಕೆಗಳು ಸರ್ಕಾರದ ಮುಂದಿದೆ. ೧೦೦ಸೇವೆಗಳನ್ನು ನೀಡುವ ಬಾಪೂಜಿ ಸೇವಾ ಕೇಂದ್ರಗಳು ಇವತ್ತು ೧೦೦ ಸಮಸ್ಯೆಗಳಾಗಿ ಮಾರ್ಪಾಡುತ್ತಿವೆ. ಸಕಾಲ ಯೋಜನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಪಂಚಾಯತ್ ಬಲವರ್ಧನೆ, ಬಾಪೂಜಿ ಕೇಂದ್ರಗಳ ಪುನಶ್ಚೇತನ, ಸಕಾಲ ಪರಿಣಾಮಕಾರಿ ಅನುಷ್ಠಾನಕ್ಕೆ ಹೋರಾಟ ರೂಪಿಸಿದ್ದೇವೆ ಎಂದರು.