ಭೋಪಾಲ್, ನ 22(SM): ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಮಧ್ಯಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ಪ್ರಚಾರ ಕಾರ್ಯಕ್ಕೆ ಧುಮುಕ್ಕಿದ್ದಾರೆ. ಮಧ್ಯಪ್ರದೇಶ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ನಗರ ನಕ್ಸಲ್ಗಳ ನಂಟಿದೆ ಎಂಬ ಆರೋಪವನ್ನು ಆದಿತ್ಯನಾಥ್ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.
ಭಯೋತ್ಪಾದನೆ ಮತ್ತು ನಕ್ಸಲ್ ಚಟುವಟಿಕೆ ದೇಶಕ್ಕೆ ಬಹುದೊಡ್ಡ ಸಮಸ್ಯೆಯಾಗಿರುವಾಗ ಅವರ ಬಗ್ಗೆ ಕಾಂಗ್ರೆಸ್ ಹೊಂದಿರು ಸಹಾನುಭೂತಿ ಖಂಡನೀಯ. ಕಾಂಗ್ರೆಸ್ ರೈತರ ಪರವಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ, ಮಹಾತ್ಮ ಗಾಂಧೀಜಿಯವರ ಬಯಕೆಯಂತೆ ಅದನ್ನು ವಿಸರ್ಜಿಸಬೇಕು. ಅದು ನಿಮ್ಮ ಜವಾಬ್ದಾರಿ," ಎಂದು ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಭೀಮಾ ಕೋರೆಗಾಂವ್ ಘರ್ಷಣೆ ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆಯೊಂದರ ಕುರಿತು ತನಿಖೆ ನಡೆಸುತ್ತಿರುವ ಪುಣೆ ಪೊಲೀಸರಿಗೆ ಪತ್ರವೊಂದು ಲಭಿಸಿತ್ತು. ಅದರಲ್ಲಿ ದಿಗ್ವಿಜಯ್ ಸಿಂಗ್ ಅವರ ಹೆಸರು ಉಲ್ಲೇಖವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ಅವರಿಗೆ ನಗರ ನಕ್ಸಲರ ನಂಟಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಈ ಆರೋಪವನ್ನು ನಿರಾಕರಿಸಿದ್ದ ದಿಗ್ವಿಜಯ್ ಸಿಂಗ್, ತಾಕತ್ ಇದ್ದರೆ ನನ್ನನ್ನು ಬಂಧಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದ್ದರು.
ಇಂದು ಚುನಾವಣೆ ಪ್ರಚಾರಕ್ಕೆ ಧುಮುಕಿದ್ದ ಯೋಗಿ ಇದೇ ವಿಚಾರವನ್ನೇ ಚುನಾವಣಾ ಅಸ್ತ್ರವಾಗಿ ಬಳಸಿಕೊಂಡಿರುವುದು ಕಾಂಗ್ರೆಸ್ಗೆ ಸಂಕಟವನ್ನುಂಟು ಮಾಡಿದೆ.