ಸುಬ್ರಹ್ಮಣ್ಯ,ನ 23(MSP): ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಲವು ಪೋಟೋಗಳನ್ನು ಅನುಮತಿ ಪಡೆಯದೆ ವೆಬ್ಸೈಟ್ನಲ್ಲಿ ಬಳಸಿರುವ ಎಒನ್ಲಾಜಿಸೆಸ್ (A1-logices) ಸಂಸ್ಥೆ ಹಾಗೂ ಸಂಪುಟ ನರಸಿಂಹ ಸ್ವಾಮಿ ಟ್ರಸ್ಟ್ ಈ ಎರಡು ಖಾಸಗಿ ಸಂಸ್ಥೆಗಳ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕೆ ದೇವಾಲಯವೂ, ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿದ್ದು, ಎಒನ್ಲಾಜಿಸೆಸ್ (A1-logices) ಹೆಸರಿನ ಖಾಸಗಿ ಸಂಸ್ಥೆ www.kukketemple.com,www.setmytour.com. www.snsmutt.com ಎಂಬ ಹೆಸರಿನಲ್ಲಿ ವೆಬ್ಸೈಟ್ ಪ್ರಾರಂಭಿಸಿದ್ದು ಮಾತ್ರವಲ್ಲದೆ ದೇವಸ್ಥಾನದಲ್ಲಿ ನಡೆಯುವ ಪೂಜೆಗಳನ್ನು ದೇವಾಲಯದ ಹೆಸರಿನಲ್ಲಿ ಖಾಸಗಿಯಾಗಿ ನಡೆಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜಿಲ್ಲಾಧಿಕಾರಿಯ ನೀಡಿದ ಸೂಚನೆಯಂತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್ ರವೀಂದ್ರ ಅವರು ದಾಖಲೆ ಪತ್ರಗಳ ಜತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೂಲಕ ಮಂಗಳೂರು ಬಂದರು ಸೈಬರ್ ಕ್ರೈಮ್ ವಿಭಾಗದ ಠಾಣೆಗೆ ಅ.20 ರಂದು ದೂರು ನೀಡಿದ್ದರು. ಈ ದೂರಿನಲ್ಲಿ ಅವರು ಖಾಸಗಿ ವೆಬ್ಸೈಟ್ಗಳಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಧೀನಕ್ಕೆ ಒಳಪಟ್ಟ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದೇವರ ಮೂಲ ವಿಗ್ರಹ, , ಜಾತ್ರೆ, ದೇಗುಲದ ಮುಂಭಾಗದ ಗೋಪುರ,ಉತ್ಸವ ಮೂರ್ತಿ ದೇವಸ್ಥಾನದ ಮಾಹಿತಿಗಳು, ಸೇವಾ ವಿವರ ಇತ್ಯಾದಿ ಅನುಮತಿ ಪಡೆಯದೆ ಅಕ್ರಮವಾಗಿ ಪ್ರಕಟಿಸಿ ಸುಬ್ರಹ್ಮಣ್ಯ ದೇವರ ಹೆಸರಿನಲ್ಲಿ ಭಕ್ತರಿಗೆ ಮೋಸ ಮಾಡುತ್ತಿದ್ದು. ಕಾನೂನು ಬಾಹಿರವಾಗಿ ಠೇವಣಿ ಸಂಗ್ರಹ, ಹಣ ಸಂಗ್ರಹ ನಡೆಸುತ್ತಿರುವ ಸಂಸ್ಥೆ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿತ್ತು.
ಬಳಿಕ ಪ್ರಕರಣ ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಅದರಂತೆ ನ.17ರಂದು ಸುಬ್ರಹ್ಮಣ್ಯ ಠಾಣೆಯಲ್ಲಿ ಎರಡು ಸಂಸ್ಥೆಗಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.