ಪಡುಬಿದ್ರಿ, ನ 23(SM): ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ನವಯುಗ ಟೋಲ್ ಪ್ಲಾಝಾಗಳಲ್ಲಿ ನವಂಬರ್ 26ರಿಂದ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹ ಆರಂಭಗೊಂಡಲ್ಲಿ ನವಂಬರ್ 27ರಂದು ಉಭಯ ಜಿಲ್ಲೆಗಳ ವಿವಿಧ ಸಂಘಟನೆಗಳು, ವಿವಿಧ ಪಕ್ಷಗಳ ಬೆಂಬಲಗಳೊಂದಿಗೆ ಬಂದ್ಗೆ ನಡೆಸಲಿದ್ದೇವೆ ಎಂದು ಹೋರಾಟ ಸಮಿತಿಯ ಉಪಾಧ್ಯಕ್ಷ ಗುಲಾಂ ಮಹಮ್ಮದ್ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ವಾಹನಗಳಿಂದ ಸುಂಕ ವಸೂಲಿ ಮಾಡಿದ್ದಲ್ಲಿ ಅನಿವಾರ್ಯವಾಗಿ ನವಯುಗ ಕಂಪೆನಿ ವಿರುದ್ಧ ತೀವ್ರ ಹೋರಾಟವನ್ನು ಪಕ್ಷಾತೀತವಾಗಿ ನಡೆಸಲಾಗುವುದೆಂದು ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ಇತರ ಸಮಸ್ಯೆಗಳತ್ತ ಗಮನ ಹರಿಸದೇ ನವಯುಗ ಕಂಪೆನಿಗೆ ಬೆಂಬಲ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಆರೋಪಿಸಿದ್ದಾರೆ. ಜಿಲ್ಲೆಯ ಅಲ್ಲಲ್ಲಿ ಈಗಲೂ ನವಯುಗ ನಿರ್ಮಾಣ ಕಂಪೆನಿಯ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆದಿಲ್ಲ. ಪಡುಬಿದ್ರಿಯಲ್ಲೂ ಮರಣ ಗುಂಡಿಯನ್ನು ತೋಡಿ ಕಣ್ಮುಚ್ಚಿ ಕೂತಿರುವ ನವಯುಗ ನಿರ್ಮಾಣ ಕಂಪೆನಿ ಅದೆಷ್ಟೋ ಹೆದ್ದಾರಿ ಸಾವಿಗೂ ಕಾರಣವಾಗಿದೆ.
ಜಿಲ್ಲೆಯಾದ್ಯಂತ ಅರೆಬರೆ ಕಾಮಗಾರಿಗಳನ್ನು ನಡೆಸಿರುವ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲೇ ಹೆಜಮಾಡಿಯಲ್ಲಿ ಸ್ಕೈ ವಾಕ್ ಹಾಗೂ ಸರ್ವೀಸ್ ರಸ್ತೆಗಳನ್ನೂ ನಿರ್ಮಿಸಿ ಕೊಡುವ ಮಾತನ್ನೂ ತಪ್ಪಿರುವ ನಾಚಿಕೆಗೆಟ್ಟ ಕಂಪೆನಿಗೆ ಜಿಲ್ಲಾಡಳಿತ ಬೆಂಬಲಿಸುತ್ತಿರುವುದು ಅಸಮಂಜಸ ಮತ್ತು ಹಾಸ್ಯಾಸ್ಪದವೆಂದು ಗುಲಾಂ ಮಹಮ್ಮದ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.