ಹೆಬ್ರಿ, ನ 23(SM): ಆಟವಾಡುತ್ತಿದ್ದ ಬಾಲಕನೋರ್ವ ಕಾಲು ಜಾರಿ ಕೆರೆಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಕೆಲಮಠ ಗೋಪಾಲಕೃಷ್ಣ ದೇವಸ್ಥಾನದ ಬಳಿ ಗುರುವಾರ ರಾತ್ರಿ ನಡೆದಿದೆ. ಲಕ್ಷ್ಮೀಶ ಹೆಬ್ಬಾರ್ ಎಂಬವರ ಪುತ್ರ ಅವನೀಶ್ ಹೆಬ್ಬಾರ್ ಮೃತ ಬಾಲಕ.
ಅವನೀಶ್, ಹೆಬ್ರಿಯ ಅಮೃತ ಭಾರತಿ ಶಾಲೆಯ ಮೂರನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದ. ಗುರುವಾರದಂದು ದೀಪೋತ್ಸವ ಇದ್ದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತಿತ್ತು. ಈ ಸಂದರ್ಭ ಬಾಲಕ ದೇವಸ್ಥಾನದ ಬಳಿಯಿಂದ ಆಟವಾಡುತ್ತಾ ಕೆರೆಯ ಸಮೀಪಕ್ಕೆ ತೆರಳಿದ್ದಾನೆ. ಈ ಸಂದರ್ಭ ಬಾಲಕ ಕಾಲು ಜಾರಿ ಕೆರೆಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಬಾಲಕನ ತಂದೆ ಕೆಲಮಠ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ.
ಘಟನೆಯ ಕುರಿತಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.