ದುಬೈ, ನ 23(SM): ಎರಡು ದಿನಗಳ ಕಾಲ ನಡೆಯಲಿರುವ ವಿಶ್ವ ತುಳು ಸಮ್ಮೇಳನಕ್ಕೆ ದುಬೈಯಲ್ಲಿ ನವಂಬರ್ 23ರ ಶುಕ್ರವಾರ ಅದ್ದೂರಿ ಚಾಲನೆ ನೀಡಲಾಯಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ವಂ. ಡಾ. ಪೀಟರ್ ಪೌಲ್ ಸಲ್ಡಾನಾ, ಡಾ. ಬಿ.ಆರ್. ಶೆಟ್ಟಿ, ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹೆನ್ರಿ ಡಿಸೋಜ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಅನಿವಾಸಿ ಉದ್ಯಮಿ ರೊನಾಲ್ಡ್ ಕೊಲಾಸೊ, ಸಂಸದ ವೀರಪ್ಪ ಮೊಯ್ಲಿ ಸೇರಿದಂತೆ ಹಲವು ಗಣ್ಯರ ಸಮಾಕ್ಷಮ ವಿಶ್ವ ತುಳು ಕೂಟಕ್ಕೆ ದುಬೈಯ ಅಲ್ ನಸ್ರ್ ಲೆಸರ್ ಲ್ಯಾಂಡ್ ಐಸ್ ರಿಂಕ್ ನಲ್ಲಿ ಚಾಲನೆ ನೀಡಲಾಯಿತು.
ಒಡಿಯೂರು ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ, ಪುತ್ತಿಗೆ ಶ್ರೀ ಸುಗುನೇಂದ್ರ ಸ್ವಾಮೀಜಿ, ಮಾಣಿಲದ ಶ್ರೀ ಮೋಹನ್ ದಾಸ ಸ್ವಾಮೀಜಿಗಳು ನವಂಬರ್ 24ರಂದು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಎರಡು ದಿನಗಳ ಕಾಲ ನಡೆಯುವಂತಹ ತುಳು ಹಬ್ಬದಲ್ಲಿ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರ ಅನಾವರಣಗೊಳ್ಳಲಿದೆ. ಅಲ್ಲದೆ, ಸಂಗೀತ ರಸಮಂಜರಿ, ತುಳುನಾಡಿನ ಕ್ರೀಡೆಗಳು, ನಾಟ್ಯ, ನಾಟಕ, ಯಕ್ಷಗಾನ, ವಿವಿಧ ಗೋಷ್ಠಿಗಳು ಪ್ರಮುಖ ಆಕರ್ಷಣೆಯಾಗಿವೆ.
ಸಮಾರಂಭವು ತುಳು ನಾಡಿನ ನಾಯಕ ಸರ್ವೊತ್ತಮ್ ಶೆಟ್ಟಿ ಇವರ ನೇತೃತ್ವದಲ್ಲಿ ಜರಗುತ್ತಿದೆ. ಅಲ್ಲದೆ ಶೋಧನ್ ಪ್ರಸಾದ್, ಎಸಿ ಭಂಡಾರಿ, ಧರ್ಮಪಾಲ್ ದೇವಾಡಿಗ ಅವರು ಕೂಡ ಸಮಾರಂಭ ಆಯೋಜನೆಗೆ ಸಹಕಾರವನ್ನು ನೀಡಿದ್ದಾರೆ.
ದೇಶ ವಿದೇಶಗಳಿಂದ ಸಾವಿರಾರು ಜನ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.