ಮಂಗಳೂರು, ನ24(SS): ಕಳೆದ ಚುನಾವಣೆ ಸಂದರ್ಭದಲ್ಲಿ ಪೊಲೀಸ್ ಇಲಾಖೆಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಮದನ್ ವಿರುದ್ಧ ಆರೋಪವೊಂದು ಕೇಳಿಬಂದಿದೆ. ಮದನ್ ಜೊತೆ ಬಿಜೈಯ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ವಿನಾಯಕ್ ಏಕಾಏಕಿ ಕಣ್ಮರೆಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾಯಕ್ ಹೆತ್ತವರು ಮದನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಶಕ್ತಿನಗರದ ಆಟೋ ಚಾಲಕ ಶಿವಕುಮಾರ್ ಮತ್ತು ಸಾಕಮ್ಮ ದಂಪತಿಯ ಪುತ್ರ ವಿನಾಯಕ್ ನವೆಂಬರ್ 8 ರಂದು ನಾಪತ್ತೆಯಾಗಿದ್ದು, ನವೆಂಬರ್ 15 ರಂದು ಮದನ್ ಅವರು ವಿನಾಯಕ್ ಪೋಷಕರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾರೆ. ಇದೀಗ ಪೊಲೀಸರಿಂದ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ, ಹೈಕೋರ್ಟ್ ಮೆಟ್ಟಿಲೇರಿರುವ ಹೆತ್ತವರು ವಿನಾಯಕ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಮಾತ್ರವಲ್ಲ, ವಿನಾಯಕ್ ಕಣ್ಮರೆಯಾಗುವುದರ ಹಿಂದೆ ಮಾಜಿ ಪಿಎಸ್ಐ ಮದನ್ ಅವರ ಕೈವಾಡವಿರುವುದಾಗಿ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮಗ ವಿನಾಯಕ್ ನಾಪತ್ತೆಗೆ ಮಾಜಿ ಪಿಎಸ್ಐ ಮದನ್ ಕಾರಣ. ಮಂಗಳೂರಿನ ಪೊಲೀಸರ ತನಿಖೆಯಲ್ಲಿ ನಂಬಿಕೆ ಇಲ್ಲ. ಆದ ಕಾರಣ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ.