ತಿರುವನಂತಪುರಂ, ನ24(SS): ಬ್ರಿಟಿಷ್ ಆಡಳಿತದ ಕಾಲದಲ್ಲಿ ಪ್ರಕಟವಾದ ಒಂದು ವರದಿಯ ಪ್ರಕಾರ 200 ವರ್ಷಕ್ಕೂ ಹಿಂದೆ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧ ಅನುಷ್ಠಾನದಲ್ಲಿತ್ತು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆಯ ಶ್ರೀ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶ ನಿಷೇಧಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಈ ನಿಷೇಧದ ಪ್ರತಿಪಾದಕರು ಇದೊಂದು ಪುರಾತನ ಸಂಪ್ರದಾಯ ಎಂದು ಹೇಳುತ್ತಿದ್ದರೆ, ವಿರೋಧಿಗಳು 1991ರವರೆಗೂ ಋುತುಮತಿಯಾಗುವ ವಯಸ್ಸಿನ ಮಹಿಳೆಯರಿಗೆ ಪ್ರವೇಶವಿತ್ತು ಎಂದು ವಾದಿಸುತ್ತಾರೆ. ಆದರೆ, ಬ್ರಿಟಿಷ್ ಆಡಳಿತದ ಕಾಲದಲ್ಲಿ ಪ್ರಕಟವಾದ ಒಂದು ವರದಿ 200 ವರ್ಷಕ್ಕೂ ಹಿಂದೆ ಈ ನಿಷೇಧ ಅನುಷ್ಠಾನದಲ್ಲಿತ್ತು ಎಂದು ಹೇಳುತ್ತದೆ.
ಶಬರಿಮಲೆಯಲ್ಲಿ ಅನುಷ್ಠಾನದಲ್ಲಿರುವ ಈ ಸಂಪ್ರದಾಯ ಬಹುಪುರಾತನವಾದುದು ಮತ್ತು ಅದು ಮುಂದುವರಿಯಬೇಕು ಎಂದು ವಾದಿಸುವರಿಗೆ ಇಬ್ಬರು ಬ್ರಿಟಿಷ್ ಮಿಲಿಟರಿ ಅಧಿಕಾರಿಗಳು ಸಂಗ್ರಹಿಸಿದ ವಿವರಗಳು ಮಹತ್ವದ ದಾಖಲೆಯಾಗಲಿವೆ.
ಮದ್ರಾಸ್ ಸರಕಾರವು ಎರಡು ಸಂಪುಟಗಳಲ್ಲಿ ಪ್ರಕಟಿಸಿರುವ 'ತಿರುವಾಂಕೂರು ಮತ್ತು ಕೊಚಿನ್ ರಾಜ್ಯಗಳ ಸಮೀಕ್ಷೆಯ ಘಟನಾವಳಿಗಳು' ಎಂಬ ಹೊತ್ತಿಗೆ ಎರಡು ಶತಮಾನಗಳಿಗಿಂತ ಹಿಂದೆಯೂ ಶಬರಿಮಲೆಯಲ್ಲಿ ಋುತುಚಕ್ರ ಅನುಭವಿಸುತ್ತಿರುವ ಮಹಿಳೆಯರಿಗೆ ಪ್ರವೇಶವಿರಲಿಲ್ಲ ಎನ್ನುವುದನ್ನು ಉಲ್ಲೇಖಿಸಿದೆ.