ಕಾಸರಗೋಡು ಅ16 : ವಿವಾಹದ ಭರವಸೆ ಕೊಟ್ಟು ಹದಿನಾರರ ಹರೆಯದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಬಗ್ಗೆ ಆರೋಪವುಂಟಾಗಿದೆ. ಮಾಹಿತಿ ಲಭಿಸಿದ ಚೈಲ್ಡ್ ಲೈನ್ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯಾದ ಬದಿಯಡ್ಕ ಬಳಿಯ ಪಿಲಾಂಕಟ್ಟೆಯ ರಾಜೇಶ್ (೨೩) ಎಂಬಾತನನ್ನು ಪೋಲಿಸರು ಬಂಧಿಸಿದ್ದಾರೆ. ವಿದ್ಯಾನಗರ ಸಿ.ಐ ಬಾಬು ಪೆರಿಂಙೋತ್ತ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಬದಿಯಡ್ಕ ಸಮೀಪದ ಖಾಸಾಗಿ ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಓಣಂ ಪರೀಕ್ಷೆ ಬಳಿಕ ಶಾಲೆಗೆ ತಲುಪಿರಲಿಲ್ಲ. ಸಹಪಾಠಿಗಳಲ್ಲಿ ಅತಿಯಾದ ಹೊಟ್ಟೆನೋವೆಂದು ಶಾಲೆಗೆ ಮಾಹಿತಿ ತಲುಪಿಸಿದ್ದಳು. ಶಾಲೆಗೆ ತಲುಪದ ಹಿನ್ನೆಲೆಯಲ್ಲಿ ಶಾಲಾ ಅಧಿಕಾರಿಗಳು ಬಾಲಕಿಯ ಮನೆಗೆ ತಲುಪಿದರೂ ಸರಿಯಾದ ಮಾಹಿತಿ ದೊರೆಯಲಿಲ್ಲ. ಈ ಬಗ್ಗೆ ಶಾಲೆ ಅಧಿಕಾರಿಗಳು ಚೈಲ್ಡ್ ಲೈನ್ಗೆ ತಿಳಿಸಿದ್ದರು. ಚೈಲ್ಡ್ ಲೈನ್ ಕೌನ್ಸಿಲರ್ಗಳು ಮನೆಗೆ ತಲುಪಿ ಬಾಲಕಿಯಿಂದ ಹೇಳಿಕೆ ದಾಖಲಿಸಿದಾಗ ಕಿರುಕುಳ ವಿಷಯ ಬಹಿರಂಗಗೊಂಡಿದೆ. ವಿವಾಹ ಭರವಸೆ ನೀಡಿ ರಾಜೇಶ್ ತನ್ನನ್ನು ಮಂಗಳೂರು ಸಹಿತ ವಿವಿಧೆಡೆಗೆ ಕರೆದೊಯ್ದು ಕಿರುಕುಳ ನೀಡಿರುವುದಾಗಿ ಬಾಲಕಿ ಆರೋಪಿಸಿದ್ದಾಳೆ. ಅನಂತರ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಏಳು ತಿಂಗಳ ಗರ್ಭಿಣಿಯೆಂದು ತಿಳಿದುಬಂದಿದೆ. ಬಾಲಕಿಯಿಂದ ಸಂಪೂರ್ಣ ಹೇಳಿಕೆ ದಾಖಲಿಸಿದ ಬಳಿಕ ಇಂದು ಮೆಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಗುಪ್ತವಾಗಿ ಹೇಳಿಕೆ ದಾಖಲಿಸಲಾಗುವುದು್ ಎಂದು ಪೋಲಿಸರು ತಿಳಿಸಿದ್ದಾರೆ.