ಮಂಗಳೂರು, ನ24(SS): ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಹೋಗುವ ಭಕ್ತ ಜನರು ದೇಗುಲದ ಹುಂಡಿಗೆ ಒಂದು ರೂಪಾಯಿ ಕಾಣಿಕೆಯನ್ನು ಕೂಡ ಹಾಕದಿರಿ ಎಂದು ಶಾಸಕ ವೈ.ಭರತ್ ಶೆಟ್ಟಿ ಹೇಳಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಕೆಲ ದಿನಗಳ ಹಿಂದೆ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನಾವು ದೇಗುಲದಲ್ಲಿ ಹಾಕಿದ ಕಾಣಿಕೆ ಹಣವನ್ನು ಅಲ್ಲಿನ ಸರ್ಕಾರ ಶಬರಿಮಲೆ ದೇವಸ್ಥಾನಕ್ಕೆ ಬಳಸುವುದಿಲ್ಲ. ಶಬರಿಮಲೆಯಲ್ಲಿ ಅಯ್ಯಪ್ಪ ಭಕ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕೇವಲ ಹಿಂದೂಗಳು ಮಾತ್ರ ಟಾರ್ಗೆಟ್ ಆಗುತ್ತಿದ್ದಾರೆ. ಇಡೀ ಕೇರಳದ ಹಿಂದೂಗಳು ತೀರ್ಪಿನ ವಿರುದ್ಧ ನಿಂತಿದ್ದಾರೆ ಎಂದು ಹೇಳಿದರು.
ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆಯಲ್ಲಿ ಪೊಲೀಸ್ ಸೆಕ್ಯುರಿಟಿಗಳಿಗೆ ನಿಯಮ ಇತ್ತು. ಚರ್ಮದ ಶೂ ಹಾಗೂ ಬೆಲ್ಟ್ ಹಾಕುವಂತಿರಲಿಲ್ಲ. ಔಟ್ ಶರ್ಟ್ ಮಾಡಿ ಕಪ್ಪು ಬಟ್ಟೆಯನ್ನು ಕತ್ತಿನ ಸುತ್ತ ಧರಿಸಲಾಗುತ್ತಿತ್ತು. ಆದರೆ ಈಗ ಬಂದ ಐಪಿಎಸ್ ಅಧಿಕಾರಿಗೆ ಈ ಬಗ್ಗೆ ಯಾವುದೇ ಜ್ಞಾನವಿಲ್ಲ ಎಂದು ಆರೋಪಿಸಿದರು.
ಎಲ್ಲಾ ರಾಜ್ಯಗಳಿಂದ ಲಕ್ಷಗಟ್ಟಲೆ ಜನ ಶಬರಿಮಲೆಗೆ ಹೋಗುತ್ತಾರೆ. ಅವರು ಎಷ್ಟು ಪೊಲೀಸರನ್ನು ಹಾಕುತ್ತಾರೆ ನೋಡೋಣ. ಈಗ 15 ರಿಂದ 20 ಸಾವಿರ ಪೊಲೀಸರನ್ನು ಹಾಕಿದ್ದಾರೆ. ನಾವು ಲಕ್ಷಾಂತರ ಜನ ಅಲ್ಲಿಗೆ ಮಾಲೆ ಹಾಕಿಕೊಂಡು ಹೋಗುತ್ತೇವೆ. ಕೇವಲ 15 ಸಾವಿರ ಪೊಲೀಸರಿಗೆ ನಮ್ಮನ್ನು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಸಾವಿರಾರು ವರುಷಗಳ ಇತಿಹಾಸವಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ಭಕ್ತ ಜನರು ದೇಗುಲದ ಹುಂಡಿಗೆ ಒಂದು ರೂಪಾಯಿ ಕಾಣಿಕೆಯನ್ನು ಕೂಡ ಹಾಕಬೇಡಿ ಎಂದು ವಿನಂತಿಸಿದ್ದಾರೆ.