ಹೊಸದಿಲ್ಲಿ, ನ24(SS): ಕೇಂದ್ರ ಸರ್ಕಾರವು ಮಕ್ಕಳಿಗೆ ಹೋಂವರ್ಕ್ ಕೊಡುವ ಹಾಗೂ ಶಾಲಾ ಮಕ್ಕಳ ಬ್ಯಾಗಿನ ಹೊರೆ ಇಳಿಸುವ ವಿಚಾರದಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ.
ಶಾಲಾ ಮಕ್ಕಳ ಬ್ಯಾಗಿನ ಹೊರೆ ಇಳಿಸುವ ಹಾಗೂ ಮಕ್ಕಳಿಗೆ ಹೋಂವರ್ಕ್ ಕೊಡುವ ವಿಚಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ಮಾರ್ಗದರ್ಶಿ ಸೂತ್ರ ಪಾಲಿಸುವಂತೆ ನಿರ್ದೇಶನ ನೀಡಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು 1 ಮತ್ತು 2 ನೇ ತರಗತಿಯ ಮಕ್ಕಳ ಬ್ಯಾಗಿನ ತೂಕ ಒಂದೂವರೆ ಕೆಜಿಯಷ್ಟು ಮಾತ್ರ ಇರಬೇಕು ಎಂದು ನಿರ್ದೇಶಿಸಿದೆ. ಇದೇ ರೀತಿ, 3 ಮತ್ತು 5 ನೇ ತರಗತಿಯ ಮಕ್ಕಳಿಗೆ 2 - 3 ಕೆ.ಜಿ, 6 ರಿಂದ 7 ನೇ ತರಗತಿಯ ಮಕ್ಕಳಿಗೆ 4 ಕೆಜಿ, 8 ಮತ್ತು 9 ನೇ ತರಗತಿಯ ಮಕ್ಕಳಿಗೆ ನಾಲ್ಕೂವರೆ ಕೆಜಿ ಹಾಗೂ 10 ನೇ ತರಗತಿಯ ಮಕ್ಕಳಿಗೆ ಐದು ಕೆಜಿ ಬ್ಯಾಗ್ ತೂಕ ಮೀರುವಂತಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಿದೆ.
ಈ ನಿಯಮದ ಜೊತೆಗೆ ಶಾಲಾ ಶಿಕ್ಷಕರು 1 ಮತ್ತು 2 ನೇ ತರಗತಿಯ ಶಾಲಾ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ ಎಂದು ಸೂಚನೆ ನೀಡಿದೆ. ಇನ್ನು, 1 ಮತ್ತು 2 ನೇ ತರಗತಿಯ ಶಾಲಾ ಮಕ್ಕಳಿಗೆ ಗಣಿತ ಹಾಗೂ ಭಾಷಾ ವಿಷಯಗಳನ್ನು ಮಾತ್ರ ನಿಗದಿ ಮಾಡಬೇಕು. ಹಾಗೂ, 3 ಮತ್ತು 4 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಗಣಿತ, ಭಾಷೆ ಹಾಗೂ ಇವಿಎಸ್ ಭಾಷೆಗಳನ್ನು ಮಾತ್ರ ನಿಗದಿ ಮಾಡಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸೂಚಿಸಿದೆ.