ಬೆಂಗಳೂರು, ನ 24(SM): ನಟ ಹಾಗೂ ಮಾಜಿ ಸಚಿವ ಅಂಬರೀಶ್ ನವಂಬರ್ 24ರ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಅಂಬರೀಶ್ ಬಳಲುತ್ತಿದ್ದರು. ಅನಾರೋಗ್ಯದಿಂದ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
1952ರ ಮೇ 29ರಂದು ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಅಂಬಿ ಜನಿಸಿದರು. ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಅಂಬರೀಶ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಕೊಟ್ಟು ಸಿನಿಪ್ರಿಯರ ನೆಚ್ಚಿನ ರೆಬೆಲ್ ಸ್ಟಾರ್ ಎನಿಸಿಕೊಂಡಿದ್ದರು. ಆದರೆ ಇದೀಗ ಅನಾರೋಗ್ಯದಿಂದ ಅವರು ನಿಧನ ಹೊಂದಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಅನಾಥರನ್ನಾಗಿಸಿದ್ದಾರೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಅಂಬಿ ನಟಿಸಿದ ಮೊದಲ ಚಿತ್ರ. ಈಚೆಗೆ ಬಿಡುಗಡೆಯಾದ ಅಂಬಿ ನಿಂಗ್ ವಯಸ್ಸಾಯ್ತು ಅವರ ಕೊನೆಯ ಸಿನಿಮಾವಾಗಿದೆ.
ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಅಂಬರೀಶ್, ಕಾವೇರಿ ವಿವಾದದ ಸಂದರ್ಭದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿ ಸಚಿವರಾಗಿದ್ದರು. ಪಕ್ಷದೊಳಗಿನ ಕೆಲವೊಂದು ಕಾರಣಗಳಿಂದ ಬೇಸರಗೊಂಡು ಈ ಬಾರಿಯ ವಿಧಾನಸಭಾ ಚುನಾವಣೆಯಿಂದ ಅಂಬರೀಶ್ ದೂರ ಸರಿದಿದ್ದರು.