ಜೈಪುರ, ನ 25(SM): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಬಿಜೆಪಿ ಎಂದೆಂದಿಗೂ ತಯಾರಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಧರ್ಮ ಸಭೆ ನಡೆಸಿ, ರಾಮಮಂದಿರ ನಿರ್ಮಾಣಕ್ಕೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿರುವ ಸಮಯದಲ್ಲಿ ಅಮಿತ್ ಶಾ ನೀಡಿರುವ ಈ ಮಾತು ಹೇಳಿಕೆ ಬಹಳಷ್ಟು ಮಹತ್ವ ಪಡೆದುಕೊಂಡಿದೆ.
ರಾಮ ಮಂದಿರ ನಿರ್ಮಾಣದ ನಮ್ಮ ಮಾತಿನಿಂದ ನಾವು ಹಿಂದೆ ಸರಿಯುವುದಿಲ್ಲ. ರಾಮ ಮಂದಿರ ನಿರ್ಮಾಣಕ್ಕೆ ಯಾವುದೇ ಸುಗ್ರೀವಾಜ್ಞೆಯ ಅಗತ್ಯವೂ ಇಲ್ಲ ಎಂದು ಅವರು ಹೇಳಿದ್ದಾರೆ. ಆರ್ಎಸ್ಎಸ್ ಸೇರಿ ಇತರೆ ಮಿತ್ರ ಪಕ್ಷಗಳು ಮಸೂದೆ ಅಥವಾ ಸುಗ್ರೀವಾಜ್ಞೆ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಹೇರುತ್ತಿವೆ.
ರಾಮಮಂದಿರ ವಿಷಯ ಈಗ ಸುಪ್ರೀಂಕೋರ್ಟ್ ನಲ್ಲಿದೆ. ಹೀಗಾಗಿ ಈ ವಿಚಾರವನ್ನು ಕೆದಕಲು ನಾನು ಬಯಸುವುದಿಲ್ಲ. ಆದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪೂರಕವಾಗುವಂತಹ ತೀರ್ಪು ಹೊರಬೀಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.