ಮಂಡ್ಯ, ನ 25(SM): ನವಂಬರ್ 24ರ ಶನಿವಾರ ರಾತ್ರಿ ಕರುನಾಡ ಕರ್ಣ, ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್ ಅಂಬರೀಶ್ ಉಸಿರಾಟದ ತೊಂದರೆಯಿಂದಾಗಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಅಂಬರೀಶ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸ್ಯಾಂಡಲ್ ವುಡ್ ನಟರು ಆಸ್ಪತ್ರೆಯತ್ತ ದೌಡಾಯಿಸಿದ್ದರು. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ರಾಕ್ ಲೈನ್ ವೆಂಕಟೇಶ್, ದ್ವಾರಕೀಶ್ ಸೇರಿದಂತೆ ಚಿತ್ರರಂಗದ ತಾರೆಯರು ವಿಕ್ರಂ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದಾರೆ.
ಇದೀಗ ಇಂದು ಬೆಳಗ್ಗೆಯಿಂದ ಅಂಬರೀಶ್ ಪಾರ್ಥೀವ ಶರೀರ ಬೆಂಗಳೂರಿನ ಕಂಠೀರವ ಸ್ಟೇಡಿಯಮ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಇಡಲಾಗಿದೆ. ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಪ್ರಕಟಣೆ ಪ್ರಕಾರ, ಭಾನುವಾರ ಇಡೀ ದಿನ ಕಂಠೀರವ ಸ್ಟೇಡಿಯಮ್ ನಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಮಂಡ್ಯದಿಂದ ಬರುವ ಅಭಿಮಾನಿಗಳಿಗೆ ಕೆ.ಎಸ್.ಆರ್.ಟಿ.ಸಿ. ಕಡೆಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಕುಮಾರ್ ಸ್ಮಾರಕ ಪಕ್ಕದಲ್ಲಿ ಅಂಬರೀಶ್ ಅಂತಿಮ ಸಂಸ್ಕಾರ ನಡೆಸಲು ಸರ್ಕಾರ ತೀರ್ಮಾನ ಮಾಡಿದೆ. ಕುಟುಂಬಸ್ಥರು ಮತ್ತು ಚಿತ್ರರಂಗದ ಒಪ್ಪಿಗೆ ಪಡೆದು ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಇನ್ನು ಸೋಮವಾರದಂದು ಸಕಲ ಸರಕಾರಿ ಗೌರವಗಳೊಂದಿಗೆ ಅಂಬರೀಶ್ ಪಾರ್ಥೀವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಈ ನಡುವೆ ರಾಜ್ಯ ಸರಕಾರ ಮೂರು ದಿನಗಳ ಕಾಲ ಶೋಕಾಚರಣೆಗೆ ಘೊಷಿಸಿದೆ.