ಮಂಗಳೂರು, ನ 25(SM): ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಸಚಿವ ಯು.ಟಿ ಖಾದರ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಸಚಿವ ಖಾದರ್, ಅಂಬರೀಶ್ ಅವರು ಸರಕಾರ, ಕಲಾವಿದರ ಮತ್ತು ಚಿತ್ರರಂಗದ ಕೊಂಡಿಯಾಗಿದ್ದರು. ಇದೀಗ ಆ ಕೊಂಡಿ ಕಳಚಿ ಬಿದ್ದಿದೆ. ಇದರಿಂದ ಚಿತ್ರರಂಗಕ್ಕೆ, ಸರಕಾರಕ್ಕೆ ಅಪಾರ ನಷ್ಟವಾಗಿದೆ. ಅವರ ಅಗಲಿಕೆ ದು:ಖ ತಂದಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಇನ್ನು ಅಂಬರೀಶ್ ನಿಧನಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದು, ಅಂಬರೀಶ್ ಶ್ರೇಷ್ಠ ಕಲಾವಿದರಾಗಿ, ಉತ್ತಮ ರಾಜಕಾರಣಿಯಾಗಿ ಮೆರೆದಿದ್ದರು. ಚಲನಚಿತ್ರ ರಂಗದ ಭೀಷ್ಮ ಆಗಿದ್ದ ಅವರ ಮಾತು ಚಿತ್ರರಂಗಕ್ಕೆ ಅಂತಿಮ ಆಗಿತ್ತು. ಚಿತ್ರರಂಗಕ್ಕೆ ಒಳ್ಳೆಯ ಹೆಸರು ತಂದಿದ್ದರು.
ಸಚಿವರಾಗಿ ಅದ್ಭುತ ಕಾರ್ಯ ಮಾಡಿದ್ದರು. ರಾಜಕಾರಣ, ಚಿತ್ರರಂಗಕ್ಕೆ ತುಂಬಾ ನಷ್ಟವಾಗಿದೆ. ಶ್ರೇಷ್ಠ ಸಾಧಕನನ್ನು ಕಳೆದುಕೊಂಡಿದ್ದೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.