ಮಂಗಳೂರು, ನ 25(SM): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸುಗ್ರಿವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ಮಂಗಳೂರಿನ ನೆಹರೂ ಮೈದಾನದಲ್ಲಿ ಜನಾಗ್ರಹ ಸಭೆ ನಡೆಯಿತು. ವಿಶ್ವ ಹಿಂದೂ ಪರಿಷತ್, ಬಜರಂಗದಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಮಂಗಳೂರಿನ ಜ್ಯೋತಿ ವೃತ್ತದಿಂದ ಮೆರವಣಿಗೆ ಆರಂಭಗೊಂಡಿತು. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿವಿಧೆಡೆಗಳ ಸಾವಿರಾರು ಮಂದಿ ಪ್ರತಿಭಟನಾ ರ್ಯಾಲಿಯಲ್ಲಿ ತೆರಳಿ ಸಭೆಯಲ್ಲಿ ಭಾಗವಹಿಸಿದರು.
ಬಳಿಕ ನೆಹರು ಮೈದಾನದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಬಜರಂಗದಳ ರಾಷ್ಟ್ರೀಯ ಸಂಚಾಲಕ ಸೋಹನ್ ಸಿಂಗ್ ಸೋಲಂಕಿ ಭಾಗವಹಿಸಿ, ಕನ್ನಡದಲ್ಲೇ ಮಾತು ಪ್ರಾರಂಭಿಸಿದರು. ಎಲ್ಲಾ ರಾಮಭಕ್ತರಿಗೆ ನನ್ನ ನಮಸ್ಕಾರಗಳು ಎಂದು ಮಾತು ಆರಂಭಿಸಿದ ಅವರು, ಚಳಿಗಾಲದ ಅಧಿವೇಶನದಲ್ಲಿ ರಾಮಮಂದಿರಕ್ಕಾಗಿ ನಿರ್ಣಯ ಕೈಗೊಳ್ಳಬೇಕು. ಅಯೋಧ್ಯೆಯಲ್ಲಿ ರಾಮಮಂದಿರವಾಗುವರೆಗೆ ಅಚ್ಛೇ ದಿನ್ ಬರುವುದಿಲ್ಲ. ಪ್ರಸ್ತುತ ಇರುವಂತಹ ಕೇಂದ್ರ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ರಾಮಮಂದಿರ ನಿರ್ಮಾಣವಾಗಬೇಕು.
ಈ ಹಿಂದೆ ಮಂದಿರ ಎಲ್ಲಿ ಆಗಬೇಕೆಂದು ನಿರ್ಣಯ ಮಾಡಿದ್ದಲ್ಲೇ ನಿರ್ಮಾಣ ಮಾಡಲಿದ್ದೇವೆ ಎಂದರು. ಬಾಬರಿ ಮಸೀದಿ ಹೆಸರಿನಲ್ಲಿ ಎದೆ ಒಡೆದುಕೊಳ್ಳುವವರ ಕೆಲಸ ಇನ್ನು ನಡೆಯಲ್ಲ. ಪೇಜಾವರ ಶ್ರೀಗಳ ಕೈಗಳಿಂದಲೇ ರಾಮಮಂದಿರದ ಪ್ರಾಣ ಪ್ರತಿಷ್ಠೆ ನಡೆಯಲಿದೆ. ರಾಮನ ಅಸ್ಥಿತ್ವ ಪ್ರಶ್ನಿಸಿದವರನ್ನು ಇಂದು ಕೋಟಿಗಟ್ಟಲೆ ಹಿಂದೂಗಳು ರಸ್ತೆಯಲ್ಲಿ ತಂದು ನಿಲ್ಲಿಸಿದ್ದಾರೆ ಎಂದರು.