ಉಡುಪಿ, ನ 25(SM): ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪತ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿ ಬಲವಂತವಾಗಿ ಟೋಲ್ ಸಂಗ್ರಹ ಮಾಡುವ ನವಯುಗ ಕಂಪೆನಿ ವಿರುದ್ದ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿತು.
ಪ್ರತಿಭಟನಾ ನಿರತರು ಸಾಸ್ತಾನ ಟೋಲ್ ಗೇಟ್ ಬಳಿಯಿಂದ ಪಾದಯಾತ್ರೆಯ ಮೂಲಕ ಕೋಟ ಪೊಲೀಸ್ ಠಾಣೆಗೆ ತೆರಳಿದರು. ಹೆದ್ದಾರಿಯಲ್ಲಿ ಬಲವಂತವಾಗಿ ಟೋಲ್ ವಸೂಲಿ ಮಾಡುವ ಗೂಂಡಾಗಳಿಂದ ರಕ್ಷಣೆ ನೀಡವಂತೆ ಮನವಿ ಸಲ್ಲಿಸಿದರು.
ರಾಷ್ಡ್ರೀಯ ಹೆದ್ದಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು. ಅಗತ್ಯವಿರುವ ಕಡೆಗಳಲ್ಲಿ ಸರ್ವಿಸ್ ರಸ್ತೆ, ಫ್ಲೈಓವರ್, ಪಾದಚಾರಿ ಮೇಲ್ಸೇತುವೆ, ಅಂಡರ್ ಪಾಸ್, ಆಂಬುಲೆನ್ಸ್ ಗೆ ಪ್ರತ್ಯೇಕ ರಸ್ತೆ ಮಾಡಬೇಕು. ಇವುಗಳನ್ನು ಮಾಡದೆ ನವಯುಗ ಸಂಸ್ಥೆ ಟೋಲ್ ಸಂಗ್ರಹಿಸುತ್ತಿದೆ. ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು.
ಕೇಂದ್ರ ಸರ್ಕಾರ ಕೂಡಲೇ ನವಯುಗ ಕಂಪೆನಿಯ ಕಿವಿ ಹಿಂಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.