ಧರ್ಮಸ್ಥಳ, ನ26(SS): ಮುಂಡಾಜೆ ಗ್ರಾಮದ ಗುಂಡಿಲಕ್ಷ್ಮೀನಾರಾಯಣ ದೇವಾಸ್ಥಾನದ ಬಳಿ ಬಂದ 5 ಜನ ದುಷ್ಕರ್ಮಿಗಳು ಮದ್ಯಪಾನ ಮಾಡಿ ದೇವಾಸ್ಥಾನಕ್ಕೆ ಹಾಗೂ ಪಕ್ಕದ ಮನೆಗಳಿಗೆ ಕಲ್ಲು, ಬಾಟಲ್ ಎಸೆದ ಘಟನೆ ನಡೆದಿದೆ.
ಗುಂಡಿಲಕ್ಷ್ಮೀನಾರಾಯಣ ದೇವಸ್ಥಾನದ ಪಕ್ಕದ ಮನೆಯ ವಿದ್ಯಾ ಭಟ್ ಎಂಬುವವರ ಮೇಲೂ ಹಲ್ಲೆ ಮಾಡಿರುವ ಆರೋಪ ವ್ಯಕ್ತವಾಗಿದೆ. ಈ ಕೃತ್ಯವನ್ನು ಪ್ರಶ್ನಿಸಿದ ನಾಟಿ ವೈದ್ಯ ಅಪ್ಪಯ್ಯ ನಾಯ್ಕ ಎಂಬುವವರಿಗೂ ಆರೋಪಿಗಳು ಕಲ್ಲಿನಿಂದ ಜಜ್ಜಿ, ಕಾಲಿಗೆ ಕತ್ತಿಯಿಂದ ಕಡಿದು, ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ.
ಗಾಯಗೊಂಡಿದ್ದ ಅಪ್ಪಯ್ಯ ನಾಯ್ಕ್ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳಿಂದ ಕಿಡಿಗೇಡಿಗಳು ಜೀಪಿನಲ್ಲಿ ಬಂದು ತೊಂದರೆ ನೀಡುತ್ತಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಪ್ಪಯ್ಯ ನಾಯ್ಕ್, ಈ ಕೃತ್ಯ ನಡೆಸಿರುವ ಆರೋಪಿಗಳ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ಇದ್ದು, ಅವರ ಮೇಲೆ ಸಣ್ಣ ಪ್ರಕರಣ ದಾಖಲಿಸಿ ಕೈತೊಳೆದಿದ್ದಾರೆ ಎಂದು ಆರೋಪಿಸಿದ್ದಾರೆ.