ಕಾಸರಗೋಡು, ಅ 16 : ಕೇಂದ್ರ ಹಾಗೂ ರಾಜ್ಯ ಸರಕಾರಗಳ ಆಡಳಿತ ವೈಫಲ್ಯ ಹಾಗೂ ಪೆಟ್ರೋಲ್,ಡೀಸೆಲ್ ಉತ್ಪನ್ನಗಳ ಬೆಲೆಯೇರಿಕೆಯನ್ನು ಪ್ರತಿಭಟಿಸಿ ಕೇರಳದಲ್ಲಿ ವಿರೋಧ ಪಕ್ಷ ಯುಡಿಎಫ್ ಕರೆನೀಡಿರುವ ಹರತಾಳದ ಹಿನ್ನಲೆಯಲ್ಲಿ ಬಸ್ಸು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕೆಲವೊಂದೆಡೆ ಖಾಸಗಿ ವಾಹನಗಳು ಸಂಚಾರಿಸುತ್ತಿದ್ದರೂ ಅಂಗಡಿ ಮುಂಗಟ್ಟುಗಳು ಮುಚ್ಚಿವೆ.ರಸ್ತೆಗಿಳಿದ ಹಲವು ವಾಹನಗಳನ್ನು ಕಾಸರಗೋಡು ನಗರ ಹಾಗೂ ಹೊರವಲಯದಲ್ಲಿ ಹರತಾಳ ಬೆಂಬಲಿಗರು ತಡೆದ ಘಟನೆ ನಡೆದಿದೆ. ಆದರೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ ಶಾಲಾ- ಕಾಲೇಜುಗಳಲ್ಲಿ , ಸರಕಾರಿ ಕಚೇರಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ , ನೌಕರರ ಸಂಖ್ಯೆ ವಿರಳವಾಗಿದೆ.ಹರತಾಳದ ಹಿನ್ನಲೆಯಲ್ಲಿ ಕೇರಳ ವಿಶ್ವವಿದ್ಯಾನಿಲಯ , ಮಹಾತ್ಮಾಗಾಂಧಿ ವಿಶ್ವ ವಿದ್ಯಾನಿಲಯ , ಕಣ್ಣೂರು ವಿಶ್ವ ವಿದ್ಯಾನಿಲಯ , ಕಲ್ಲಿಕೋಟೆ ವಿಶ್ವ ವಿದ್ಯಾನಿಲಯಗಳಲ್ಲಿ ನಡೆಸುತ್ತಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದ
ಬಸ್ಸು ಸಂಚಾರ ಸ್ಥಗಿತ ಗೊಂಡ ಹಿನ್ನಲೆಯಲ್ಲಿ ಬೆಳಿಗ್ಗೆ ರೈಲುಗಳಲ್ಲಿ ಆಗಮಿಸಿದ ಪ್ರಯಾಣಿಕರನ್ನು ಪೊಲೀಸರು ತಮ್ಮ ವಾಹನಗಳಲ್ಲಿ ತಲಪಿಸುವ ವ್ಯವಸ್ಥೆಯನ್ನು ಮಾಡಿದರು .ಹರತಾಳದ ಹಿನ್ನಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ತೆಗೆದುಕೊಂಡಿದ್ದಾರೆ .
ಪ್ರಮುಖ ಕೇಂದ್ರಗಳಲ್ಲಿ ಯು ಡಿ ಎಫ್ ಪ್ರತಿಭಟನೆ ಮತ್ತು ಮೆರವಣಿಗೆಯನ್ನು ಹಮ್ಮಿಕೊಂಡಿದೆ.ಕಾಸರಗೋಡು ನಗರ , ಕುಂಬಳೆ , ಕಾಞoಗಾಡ್ , ಉಪ್ಪಳ , ಬದಿಯಡ್ಕ , ಉದುಮ ಸೇರಿದಂತೆ ಬಹುತೇಕ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬಸ್ಸು ಸೌಲಭ್ಯ ವಿಲ್ಲದೆ ವಿದ್ಯಾರ್ಥಿಗಳು , ಸಾರ್ವಜನಿಕರು ಪರದಾಡುವಂತ ಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ.